26/05/2026
ಸತ್ಯಾಚರಣೆ
ಋಷಿಗಳ ಹೃದಯ ಕರುಣಾಪೂರ್ಣ, ಪುರಾತನ ಮಕ್ಕಳು ವಿದ್ಯಾರ್ಜನೆಗಾಗಿ ಋಷಿಗಳ ಹತ್ತಿರ ಹೋದರು. ಅರಣ್ಯದ ಮಧ್ಯದ ಪ್ರಶಾಂತ ಪರಿಸರ, ಕುಟೀರವಾಸ. ಹನ್ನೆರಡು ವರುಷ ಅವರು ಆ ಮಕ್ಕಳಿಗೆ ಆಶ್ರಮದಲ್ಲಿ ಒಲವಿನ ಆಶ್ರಯವನ್ನಿತ್ತರು. ಪ್ರಾಪಂಚಿಕ ಜೀವನಕ್ಕೆ ಬೇಕಾಗುವ ಎಲ್ಲ ವಿದ್ಯೆಗಳನ್ನು ಅವರಿಗೆ ನೀಡಿದರು. ಅವರ ವಿದ್ಯಾರ್ಜನೆ ಪೂರ್ಣವಾದ ನಂತರ ಅವರವರ ಗ್ರಾಮಗಳಿಗೆ ಅವರನ್ನು ವಿದ್ಯಾಧರರನ್ನಾಗಿ, ಜ್ಞಾನದ ಮಾಡಿ ಕಳುಹಿಸಿಕೊಟ್ಟರು. ಕಳುಹಿಸಿಕೊಡುವಾಗ ಮೂರ್ತಿಗಳಾದ ಋಷಿಗಳು ಸುಂದರ ನೀಡಿದರು! ಅದು ಅವರ ಬದುಕಿಗೆ ಬುನಾದಿ ಆಯಿತು. ಹೆಚ್ಚೇನು ಅದರಿಂದ ಅವರ ಬದುಕೇ ಸಂತಸದ ಹೊನಲಾಯಿತು. ಆ ಮಹರ್ಷಿಗಳು ನೀಡಿದ ಆ ಅಮರ ಸೊಗಸಾಗಿದೆ ನೋಡಿ.
ಸತ್ಯಂ ವದ| ಧರ್ಮಂ ಚರ| ಏಷ ಆದೇಶ।
ಏಷ ಉಪದೇಶಃ| ಏತದನುಶಾಸನಮ್| (ತೈ.ಆ.೧೧)
ಸತ್ಯವನ್ನೇ ನುಡಿಯಿರಿ. ಧರ್ಮದಂತೆಯೇ ನಡೆಯಿರಿ. ಇದುವೆ ಆದೇಶ (ಆಜ್ಞೆ) ಇದುವೆ ಉಪದೇಶ (ಬೊಧನೆ). ಇದುವೆ ಅನುಶಾಸನ (ಕಾಯ್ದೆ) ಸುಂದರ ಶಿಕ್ಷಣ!! ಇದಕ್ಕಿಂತ ಮಿಗಿಲಾದ ಶುಭಸಂದೇಶ ಇನ್ನಾವುದಿರಲು ಸಾಧ್ಯ? ಇವೆರಡು ನುಡಿಗಳನ್ನು ಪಾಲಿಸಿದರೆ ಸಾಕು, ನಮ್ಮ ಬದುಕು ಭವ್ಯ ದಿವ್ಯವಾಗುವುದರಲ್ಲಿ ಸಂದೇಹವಿಲ್ಲ. ಸತ್ಯದ ನುಡಿ, ಧರ್ಮದ ನಡೆ ಇಲ್ಲದ ಬದುಕು, ಅದೇತರ ಬದುಕು? ಎಷ್ಟು ಕಲಿತರೇನು, ಓದಿದರೇನು ಇವೆರಡನ್ನು ಕಲಿತರೆ ಸಾಕು, ಎಲ್ಲವನ್ನೂ ಕಲಿತಂತೆಯೇ ಅಲ್ಲವೆ?
“ಸತ್ಯಂ ಏಕಪದಂ ಬ್ರಹ್ಮ” ಸತ್ಯವು ಒಂದೇ ಆಗಿದೆ. ಅದುವೆ ಬ್ರಹ್ಮಪದವಾಗಿದೆ. ಈ ಜಗತ್ತಿನಲ್ಲಿ ಇರುವುದು ಸತ್ಯ ಒಂದೇ! ಅಸತ್ಯವು ಇಲ್ಲವೇ ಇಲ್ಲ. ಅದು ಇರುವಂತೆ ತೋರಿದೆ ಅಷ್ಟೇ! ಸತ್ಯದ ಎರಡು ಪ್ರಮುಖ ಲಕ್ಷಣಗಳೆಂದರೆ- ೧) ಅದ್ವಿತೀಯ ೨) ಅವಿನಾಶಿ! ಸಮಸ್ತ ಪ್ರಪಂಚದಲ್ಲಿರುವ ಪರಮಸತ್ಯ ಪರಮಾತ್ಮ ಒಂದೇ ಆಗಿದೆ. ಮರದಲ್ಲಿ ಅರಳಿದ ಹೂವು ಅದೆಷ್ಟು ಸುಂದರ, ಸುಭಗ! ಆದರೆ ಒಂದೆರಡು ದಿನಗಳಲ್ಲಿ ಅದು ಬಾಡಿ, ಮಣ್ಣಲ್ಲಿ ಕೂಡಿ ಮರೆಯಾಗಿ ಹೋಗುತ್ತದೆ. ಈ ಪ್ರಪಂಚವು ಒಂದು ದಿವ್ಯ ಪುಷ್ಪ. ಏನದರ ಸೊಬಗು, ಸೌಂದರ್ಯ! ಆದರೆ ಇದು ಕೂಡಾ ಹೂವಿನಂತೆ ಒಂದು ದಿನ ಮರೆಯಾಗಿ ಹೋಗುತ್ತದೆ. ಈ ಪ್ರಪಂಚವು ಒಂದು ತಾತ್ಕಾಲಿಕ ಸತ್ಯವೇ ವಿನಾ ಶಾಶ್ವತ ಸತ್ಯವಲ್ಲ.
ಪರಮಸತ್ಯವು ಹೆಣ್ಣಲ್ಲ, ಗಂಡಲ್ಲ, ಅದು ಸ್ವಾವಲಂಬಿ. ಅದು ಯಾರ ಮೇಲೆಯೂ ಅವಲಂಬಿಸಿಲ್ಲ. ಪ್ರಪಂಚದ ಜನರೆಲ್ಲ ಸೇರಿ ಸತ್ಯವೇ ಇಲ್ಲವೆಂದು ಕೂಗಾಡಿದರೂ ಅದು ಇಲ್ಲದಂತಾಗುವುದಿಲ್ಲ. ಹಾಗೆ ಕೂಗಾಡಿದವರೇ ಒಂದು ದಿನ ಇಲ್ಲದಂತಾಗಿ ಹೋಗುತ್ತಾರಷ್ಟೇ! ಆಕಾಶದಲ್ಲಿ ತೋರಿದ ಮೇಘಗಳೆಲ್ಲವೂ ಮರೆಯಾಗಿ ಹೋಗುತ್ತವೆ. ಆಕಾಶ ಮಾತ್ರ ಎಲ್ಲಿಯೂ ಹೋಗುವುದಿಲ್ಲ. ಅದು ಸ್ಥಿರವಾಗಿರುತ್ತದೆ. ಆಕಾಶದಂತೆ ಅವಿನಾಶಿಯಾದುದೇ ಪರಮಸತ್ಯ ಪರಮಾತ್ಮ ಮೇಘದಂತೆ ಅಸ್ಥಿರವಾದುದುದೇ ಈ ಪ್ರಪಂಚ! ಆ ಪರಮಸತ್ಯವನ್ನು ಪ್ರೀತಿಸಿ, ಅರಿತು, ಆಚರಿಸುವುದೇ ಧರ್ಮವಾಗಿದೆ.
ನಮ್ಮ ಅನುಕೂಲಕ್ಕಾಗಿ ವೈಶ್ವಕಸತ್ಯ, ವಾಚಿಕಸತ್ಯ ಎಂದು ಎರಡು ರೀತಿಯಲ್ಲಿ ಹೇಳಬಹುದು. ವೈಶ್ವಿಕಸತ್ಯ ಶಿವನನ್ನು ಅರಿತು ಅನುಭವಿಸಿ ಆನಂದಿಸುವುದು. ವಾಚಿಕ ಸತ್ಯ ಅಥವಾ ವ್ಯಾವಹಾರಿಕ ಸತ್ಯವನ್ನು ದೈನಂದಿನ ಜೀವನದಲ್ಲಿ ನುಡಿದು, ನಡೆಯುವುದು. ನಮ್ಮ ಪ್ರಪಂಚ ಅಥವಾ ಬದುಕು ಸತ್ಯದ ಮೇಲೆ ನಿಂತಿದೆ ವಿನಾ ಅಸತ್ಯದ ಮೇಲೆ ಸುಳ್ಳಿನ ಮೇಲೆ ನಿಂತಿಲ್ಲ. ನಾಳೆ ಬರುತ್ತೇನೆ ಎಂದು ಹೇಳಿ ಹೋದ ಸೂರ್ಯನು ಬರದಿದ್ದರೆ, ಗಾಳಿ ಬೀಸದಿದ್ದರೆ ಮಳೆಯಾಗದಿದ್ದರೆ ಜಗತ್ತು ನಡೆಯುವುದಾದರೂ ಹೇಗೆ? ನೀರು ಹನಿಸಿದರೆ ಮಾತ್ರ ಮರವು ಹೂವು, ಕಾಯಿ, ಹಣ್ಣು ಕೊಡುತ್ತದೆ. ಹಸುವಿಗೆ ಅಥವಾ ಎಮ್ಮೆಗೆ ನೀರು, ಮೇವು ಸರಿಯಾಗಿ ಕೊಟ್ಟರೆ ಮಾತ್ರ ಅವು ಹಾಲನ್ನು ಕೊಡುತ್ತವೆ. ಅಲ್ಪ-ಸ್ವಲ್ಪ ನೀರು, ಮೇವು ಕೊಟ್ಟು ಬಹಳಷ್ಟು ಕೊಟ್ಟೆ ಎಂದು ಹೇಳಿ ನಾವು ಜನರಿಗೆ ಮೋಸ ಮಾಡಬಹುದು. ಆದರೆ ಆ ಪ್ರಾಣಿಗಳು ಮಾತ್ರ ನಾವು ಕೊಟ್ಟ ಆಹಾರಕ್ಕೆ ತಕ್ಕಂತೆ ಹಾಲು ಕೊಡುತ್ತವೆ ವಿನಾ ಅದರಲ್ಲಿ ಹೆಚ್ಚು ಕಡಿಮೆ ಎಂದೂ ಮಾಡುವುದಿಲ್ಲ. ಆ ಮೂಕ ಮುಗ್ಧ ಪಶುಗಳಲ್ಲಿರುವ ಪ್ರಾಮಾಣಿಕತೆ ಸತ್ಯಾಚರಣೆ ಮನುಷ್ಯನಲ್ಲಿ ಇಲ್ಲದಿದ್ದರೆ ಹೇಗೆ? ಈ ನೆಲ, ಜಲ, ಗಾಳಿ ಬೆಳಕು, ಪಶು ಪಕ್ಷಿ ಗಿಡ-ಮರ ಸಮಸ್ತ ಸೃಷ್ಟಿಯು ಸನ್ಮಾರ್ಗದಲ್ಲಿ ನಡೆದಿದೆ ಎಂದೇ ನಾವು ಬದುಕಿದ್ದೇವೆ, ಇಲ್ಲದಿದ್ದರೆ ಆ ದೇವರೇ ಗತಿ!!
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್|
ಸತ್ಯಮಪಿ ಅಪ್ರಿಯಂ ನ ಬ್ರೂಯಾತ್||
ನಾವೆಲ್ಲರೂ ಸತ್ಯವನ್ನೇ ಹೇಳಬೇಕು. ಆದರೆ ಅದನ್ನು ಸವಿಯಾಗಿ ಹೇಳಬೇಕು. ಸತ್ಯವೇ ಆಗಿದ್ದರೂ ಸವಿಯಾಗಿರದಿದ್ದರೆ, ಕಹಿಯಾಗಿದ್ದರೆ ಹೇಳಬಾರದು. ಸತ್ಯವನ್ನೇ ಹೇಳುತ್ತೇವೆಂದು ನಮಗೆ ಗೊತ್ತಿರುವುದನ್ನೆಲ್ಲ ಹೇಳುತ್ತ ಹೋಗುವುದು ಸಮಂಜಸವಾಗಲಾರದು. 'ಸತ್ಯಾನ್ನಾಸ್ತಿ ಪರೋಧರ್ಮಃ' ಸತ್ಯಕ್ಕಿಂತ ಶ್ರೇಷ್ಠವಾದ ಧರ್ಮವೇ ಇನ್ನೊಂದಿಲ್ಲ. 'ಸತ್ತೇ ಸರ್ವಂ ಪ್ರತಿಷ್ಠಿತಂ' ಸತ್ಯದ ಮೇಲೆಯೇ ಎಲ್ಲವೂ ನಿಂತಿದೆ. ಆದುದರಿಂದ ನಾವು ಸತ್ಯವನ್ನೇ ಗೌರವಿಸಬೇಕು, ಆರಾಧಿಸಬೇಕು, ನುಡಿಯಬೇಕು, ನಡೆಯಬೇಕು. ನಮ್ಮ ತನು, ಮನ, ಬುದ್ಧಿ, ಭಾವ ಸರ್ವಾಂಗಗಳಲ್ಲಿ ಸತ್ಯವೇ ತುಂಬಿಕೊಳ್ಳಬೇಕು. ಅದು ಸತ್ಯಾಚರಣೆ. ಈ ಜಗತ್ತನ್ನು ಶರಣರು ಸಂತರು ಸತ್ಯವನ್ನು ಹೃದಯಾರೆ ಪ್ರೀತಿಸುತ್ತಾರೆ. ಪ್ರಾಪಂಚಿಕ ವಿಷಯ ವಸ್ತುಗಳ ಮೋಹ ಹೆಚ್ಚಾದಂತೆ, ಪರಮಸತ್ಯ ಪರಮಾತ್ಮನ ಮೇಲಿನ ಪ್ರೀತಿಯು ಸ್ವಾಭಾವಿಕವಾಗಿಯೇ ಕಡಿಮೆಯಾಗುತ್ತದೆ. ಮೋಹಕ ಪ್ರಪಂಚದ ಆಕರ್ಷಣೆಗೆ ಒಳಗಾಗಿ ಅನೇಕರು ಅಸತ್ಯದ ಆರಾಧಕರೇ ಆಗಿದ್ದಾರೆ. ಸತ್ಯವನ್ನು ಮನಸಾರೆ ಪ್ರೀತಿಸುವ ಸತ್ಯಾರಾಧಕರು ದೊರೆಯುವುದು ತೀರಾ ಕಡಿಮೆ ಅಥವಾ ದೊರೆಯುವುದಿಲ್ಲವೆಂದು ಹೇಳಿದರೂ ನಡೆದೀತು.
ಒಂದು ಊರಿನಲ್ಲಿ ಓರ್ವ ಯುವಕನು ಸತ್ಯದೇವತೆಯನ್ನು ಹುಡುಕುತ್ತಾ ಹೊರಟ. ಪ್ರಪಂಚದ ತುಂಬಾ ಹುಡುಕಿದರೂ ಎಲ್ಲಿಯೂ ಸತ್ಯದೇವತೆಯು ಕಾಣಲಿಲ್ಲ. ಅರಣ್ಯದಲ್ಲಿದ್ದರೂ ಇರಬಹುದೆಂದು ಅಲ್ಲಿಗೆ ಹೋದ. ಅಲ್ಲಿ ಒಂದು ಶುಭ್ರವಾದ ಹಾಲುಗಲ್ಲಿನ ಮೂರ್ತಿ ಕಂಡಿತು. ಆಗ ಅವರಿಬ್ಬರ ಮಧ್ಯದಲ್ಲಿ ಸಂಭಾಷಣೆ ನಡೆಯಿತು.
ಯುವಕ - ಯಾರು ನೀನು?
ಮೂರ್ತಿ - ನಾನು ಸತ್ಯದೇವತೆ.
ಯುವಕ - ಊರಿನಲ್ಲಿರುವುದನ್ನು ಬಿಟ್ಟು ಅರಣ್ಯದಲ್ಲಿ ಏಕೆ ಇರುವಿ?
ಮೂರ್ತಿ - ಊರಿನಲ್ಲಿರಲು ಯಾರೂ ನನಗೆ ಅವಕಾಶ ಮಾಡಿಕೊಡಲಿಲ್ಲ ಅದಕ್ಕೆ.
ಯುವಕ - ಹಾಗೇನಿಲ್ಲ 'ಸತ್ಯಕ್ಕೆ ಸಾವಿಲ್ಲ, ಸತ್ಯವೇ ಶ್ರೇಷ್ಠ' ಎಂದು ಹೇಳಿ ಎಲ್ಲರೂ ನಿನ್ನನ್ನೇ ನಿತ್ಯ ಸ್ತುತಿಸುತ್ತಾರೆ, ಸ್ಮರಿಸುತ್ತಾರೆ.
ಮೂರ್ತಿ - ಅದೆಲ್ಲ ಬರೀ ಬಾಯಿಮಾತು. ವಾಸ್ತವದಲ್ಲಿ ಯಾರೂ ನನ್ನನ್ನು ಪ್ರೀತಿಸುವುದಿಲ್ಲ.
ಯುವಕ - ಹಾಗೇನಿಲ್ಲ, ನೀನು ಊರಿಗೆ ಬರಲು ಒಪ್ಪಿದರೆ ನಾನು ಈಗಲೇ ಜನರಿಗೆ ತಿಳಿಸಿ ಬರುತ್ತೇನೆ.
ಮೂರ್ತಿ - ಅವಶ್ಯವಾಗಿ ತಿಳಿಸಿ ಬಾ. ನಾನು ಈಗಲೇ ಬರುತ್ತೇನೆ.
ಊರಲ್ಲಿ ಹೋಗಿ ಯುವಕನು ಜನರಿಗೆ ಕೇಳಿದರೆ “ನಿಜವಾಗಿಯೂ ಸತ್ಯವೇ ಸರ್ವಶ್ರೇಷ್ಠವಾದುದು, ಆದರೆ ಸತ್ಯವನ್ನು ಹೇಳುವುದರಿಂದ ನಮಗೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ. ಸತ್ಯದೇವತೆ ಬರಲಿ ಆದರೆ ನಮ್ಮೂರಲ್ಲಿರುವುದು ಬೇಡ, ಬೇರೆಯವರ ಊರಲ್ಲಿರುವುದಾದರೆ ಇರಲಿ!” ಎಂದು ಎಲ್ಲರೂ ಹೇಳಿದರು. ನಿರುಪಾಯನಾದ ಯುವಕನು ಮತ್ತೆ ಅರಣ್ಯಕ್ಕೆ ಹೋಗಿ ನಡೆದುದನೆಲ್ಲ ಸತ್ಯದೇವತೆಗೆ ಹೇಳಿದ. “ಈಗಲಾದರೂ ತಿಳಿಯಿತೆ ಈ ಜಗತ್ತು ಹೇಗಿದೆ ಎಂದು? ಪುಣ್ಯಕ್ಕೆ ನೀನೊಬ್ಬನಾದರೂ ನನ್ನ ಹುಡುಕಿಕೊಂಡು ಬಂದಿರುವೆಯಲ್ಲಾ ಸಾಕು ನನ್ನ ಜನ್ಮ ಸಾರ್ಥಕವಾಯಿತು!!” ಎಂದು ಸತ್ಯದೇವತೆ ಹೇಳಿದಾಗ ಈರ್ವರ ಕಣ್ಣುಗಳಲ್ಲಿ ಆನಂದ ಭಾಷ್ಪ ಧಾರೆಯಿಟ್ಟಿತ್ತು!
ಅಮರ, ಅವಿನಾಶಿ, ಅದ್ವಿತೀಯ ಆಗಿರುವ ಈ ಪರಮಸತ್ಯ ಪರಮಾತ್ಮನನ್ನು ನಾವು ಹೃದಯಾರೆ ಪ್ರೀತಿಸಬೇಕು. ಆಗ ನಮ್ಮ ಜೀವನದಲ್ಲಿ ಪರಮಶಾಂತಿ ಪರಮಾನಂದವು ತುಂಬಿಕೊಳ್ಳುತ್ತದೆ! ಜೀವನವು ಸಾರ್ಥಕವೆನಿಸುತ್ತದೆ, ಇದುವೇ ಸತ್ಯಾಚರಣೆ!
ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳವರ ಪ್ರವಚನಗಳು
ಪುಸ್ತಕ: ಸದಾಚಾರ
ಸಂಪಾದನೆ: ಡಾ. ಶ್ರದ್ಧಾನಂದ ಸ್ವಾಮಿಗಳು
©ಜ್ಞಾನಯೋಗ ಫೌಂಡೇಶನ್, ವಿಜಯಪುರ
To Donate: http://jnanayogashrama.org/mdsmall/donate.php
To buy book: http://jnanayogashrama.org/mdsmall/viewbooks.php?param=33