16/02/2026
*ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ನೇರ ಆಡಳಿತಕ್ಕೊಳಪಟ್ಟ,* *ಶ್ರೀರಾಮಚಂದ್ರಾಪುರ ಮಠದ ಹೆಮ್ಮೆಯ ಅಂಗ ಸಂಸ್ಥೆ,*
*ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾಗಿ ಬೆಳೆದಿರುವ ಶ್ರೀರಾಮನ ಚೊಕ್ಕ* *ಅಡಿಯ* *ಶ್ರೀರಾಮ ದೇವಾಲಯ ಚೊಕ್ಕಾಡಿ*
*ಬಂಟಮಲೆಯ* *ಬೆರಗು* :
ಸುಳ್ಯ ತಾಲೂಕಿನ ಕೇಂದ್ರ ಭಾಗದಿಂದ ಎಂಟು ಕಿ. ಮೀ. , ಕುಂಬ್ರ - ಬೆಳ್ಳಾರೆ - ನಿಂತಿಕಲ್ಲು - ಸುಬ್ರಹ್ಮಣ್ಯ ರಸ್ತೆಯ ಅಯ್ಯನಕಟ್ಟೆಯ ತಿರುವಿನಿಂದ ಆರು ಕಿ.ಮೀ. ದೂರದಲ್ಲಿರುವ, ಅಮರಪಡ್ನೂರು ಮತ್ತು ಮೂಡ್ನೂರು ಅವಳಿ ಗ್ರಾಮ ವ್ಯಾಪ್ತಿಯ ಚೊಕ್ಕಾಡಿ ಒಂದು ಸಾಹಿತ್ಯ, ಸಾಂಸ್ಕೃತಿಕ , ಧಾರ್ಮಿಕ ಕ್ಷೇತ್ರವಾಗಿದೆ. ಪ್ರಸ್ತುತ ಸುಸಜ್ಜಿತ, ಸುವ್ಯವಸ್ಥೆಯ, ಜನಾಕರ್ಷಣೆಯ ಕೇಂದ್ರವಾಗಿ ಗುರುತಿಸಲ್ಪಡುತ್ತಿದೆ. ಬಂಟಮಲೆಯ ಪದತಲದಲ್ಲಿ, ಬೆಳ್ಳಾರೆ - ಅಯ್ಯನಕಟ್ಟೆ - ಬೇಂಗಮಲೆ - ಸುಳ್ಯ ರಸ್ತೆಗೆ ತಾಗಿಕೊಂಡೇ ಇರುವ ಚೊಕ್ಕಾಡಿಯ ಪುಣ್ಯಕ್ಷೇತ್ರ.
*ದೇಸೀ *ಭವನ*:
ಶ್ರೀರಾಮ ದೇವಾಲಯದ ಒತ್ತಿಗೇ ನಿರ್ಮಿತವಾಗಿರುವ, ವಿಸ್ತಾರವಾದ ಸ್ಥಳಾವಕಾಶವಿರುವ ಸಭಾಮಂಟಪವಿದು. ವಾಹನ ನಿಲುಗಡೆಗೆ ಬೇಕಾಗುವಷ್ಟು ಜಾಗ, ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲು, ಕಾಫಿ ಊಟ ವ್ಯವಸ್ಥೆಗೆ ಪ್ರತ್ಯ ಪ್ರತ್ಯೇಕ ವಿಭಾಗಗಳು, ಗಾಳಿ ಬೆಳಕು, ನೀರಾವರಿ ವ್ಯವಸ್ಥೆಯನ್ನು ಹೊಂದಿರುವ ಅಚ್ಚುಕಟ್ಟು ಅಡುಗೆ ಮನೆ, ಉಗ್ರಾಣ, ಯಥೇಚ್ಚ ಪಾತ್ರೆ ಪರಿಕರಗಳು .... ಹೀಗೆ ಒಂದಲ್ಲ ಎರಡಲ್ಲ.... ಹಲವು ವಿಶೇಷತೆಗಳಿಂದ ಕೂಡಿರುವ ತಾಣವಿದು. ಎಲ್ಲಾ ವರ್ಗದವರಿಗೂ ಹೊಂದಾಣಿಕೆಯಾಗುವ ವ್ಯವಸ್ಥೆ ಇಲ್ಲಿದೆ.... ದರದಲ್ಲೂ ವ್ಯವಸ್ಥೆಯಲ್ಲೂ. ಒಮ್ಮೆ ಈ ಕ್ಷೇತ್ರಕ್ಕೆ ಬಂದವರಿಗೆ ಇನ್ನೊಮ್ಮೆ ಬರುವ.... ಇಲ್ಲೇ ಕಾರ್ಯಕ್ರಮ ಆಯೋಜಿಸುವ ಎಂಬಷ್ಟು ತೃಪ್ತಿ ಸಮಾಧಾನ ನೀಡುವ ತಾಣವಿದು. ಸಣ್ಣದು ದೊಡ್ಡದು ಎಂಬ ವ್ಯತ್ಯಾಸವಿಲ್ಲದೆ, ಸಾವಿರಕ್ಕಿಂತ ಮಿಕ್ಕಿದ ಜನ ಸಂದಣಿ ಕೂಡಿದರೂ ಚೂರೂ ಕಿರಿಕಿರಿ ಎನಿಸದಂತಿರುವ, ಪೇಟೆಯ ಮಾಲಿನ್ಯವಿನ್ನೂ ಸೋಂಕದಿರುವ, ಸಾಕ್ಷಾತ್ ಶ್ರೀರಾಮಚಂದ್ರನೇ ನೆಲೆಸಿದ್ದ ಪಂಚವಟಿ ಪ್ರದೇಶದಂತಿರುವ ಪ್ರಕೃತಿ ರಮ್ಯ ತಾಣ. ಮನೆಯ ವಾತಾವರಣದಂತೆ ಅನುಭವ ನೀಡುವ ಆಡಳಿತ ಮಂಡಳಿಯ ತಂಡದವರ ಸ್ನೇಹಶೀಲ ನುಡಿಗಳು ಮತ್ತು ಸಹಕಾರಕ್ಕೆ ಸದಾ ಸಿದ್ಧವಾಗಿರುವ ನಡೆಗಳು ಎಂಥವರನ್ನೂ ಮತ್ತೆ....ಮತ್ತೆ ಸೆಳೆಯುವಂತಿರುವ ಕ್ಷೇತ್ರವಿದು.
*ದೇರಾಜೆಯೆಂಬ* *ಒರತೆ* :
ಇಲ್ಲಿಗೊಂದು ವಿಶೇಷತೆ ಇದೆ.... ದೇರಾಜೆ ಎಂಬ ಹೆಸರಿನ ಹಿನ್ನೆಲೆಯ ನೆಲೆಗಾಗಿ. ಕೇವಲ ಸುಳ್ಯ ಮಾತ್ರವಲ್ಲ ದ ಕ ಜಿಲ್ಲೆಯಾದ್ಯಂತ " *ದೇಸೀ* **ಭವನ* (ದೇರಾಜೆ ಸೀತಾರಾಮಯ್ಯ)ಎಂದೇ ಖ್ಯಾತವಾಗಿರುವ ವಠಾರವಿದು. ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ, ಯಕ್ಷಗಾನ ಸಾಹಿತ್ಯಕ ಬರವಣಿಗಳಿಂದ ಕನ್ನಡ ಸಾರಸ್ವತ ಲೋಕದ ದಿಗ್ಗಜ ಎನಿಸಿದ, ರಸ ಋಷಿ ಎಂದೇ ಕರೆಯಲ್ಪಡುವ, ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿಗಳೂ ಆಗಿದ್ದ *ದೇರಾಜೆ* *ಸೀತಾರಾಮಯ್ಯನವರಿಂದ* ಸ್ಥಾಪಿತವಾಗಿರುವ ದೇವಸ್ಥಾನವಿದು. ಇದರ ಪಕ್ಕಕ್ಕೇ ಇರುವ ಉಳ್ಳಾಕುಳು ಯಾನೆ ನಾಯರ್ ದೈವಗಳ ಆರಾಧನಾ ಸ್ಥಾನ ವಿಶೇಷತೆಯ ಕಾರ್ಣಿಕವೂ ಇದಕ್ಕಿದೆ.
*ಹಿನ್ನೆಲೆ* :
1946ರಲ್ಲಿ ಸ್ಥಾಪಿತವಾದ ದೇವಸ್ಥಾನವಿದು. 1970ರ ಆಸುಪಾಸಿನಲ್ಲಿ ಮೊಳಹಳ್ಳಿ ಶಿವರಾಯರು ಈ ಊರಿಗೆ ಬಂದಿದ್ದಾಗ "ದೇವಾಲಯವೇ ಇಲ್ಲದಿದ್ದ ಊರಿನಲ್ಲಿ ಶ್ರೀರಾಮ ದೇವಸ್ಥಾನವನ್ನು ಕಟ್ಟಿಸಿದ ಸೀತಾರಾಮಯ್ಯನವರಿಗೆ ಮುಂದೆ ಹೊರೆಯಾಗದಂತೆ, ಸಕಲ ಜನರೂ ಸಹಕರಿಸಿ ದೇವಸ್ಥಾನವನ್ನು ಊರವರೇ ನಡೆಸಿಕೊಂಡು ಬರಬೇಕೆಂದು" ಕರೆ ನೀಡಿದ್ದರು. ಬಹುಶಃ ಈ ಮಾತೇ ಮುಂದಿನ ದಿನಗಳಲ್ಲಿ, ಊರವರು ಶ್ರೀರಾಮ ಸೇವಾ ಸಮಿತಿಯನ್ನು ರಚಿಸಿಕೊಂಡು, ದೇವಾಲಯದ ಅಭಿವೃದ್ಧಿ, ಬ್ರಹ್ಮ ಕಲಶೋತ್ಸವವೇ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಕಾರಣವಾಗಿದೆ. ಆ ನಂತರ ಈ ಊರಿನ ಜನತೆ ಶ್ರೀದೇವಳದ ಭೌತಿಕ ಅಭಿವೃದ್ಧಿ ಕಾರ್ಯಗಳನ್ನು, ಸಾಂಸ್ಕೃತಿಕ ಚಟುವಟಿಕೆಗಳನ್ನು ಕಾಲಕಾಲಕ್ಕೆ ನಡೆಸುತ್ತಾ ಬಂದಿರುತ್ತಾರೆ. ದೇವಾಲಯದ ನಿತ್ಯ ನೈಮಿತ್ತಿಕ ಪೂಜಾದಿಗಳ ನಿರ್ವಹಣೆಗಾಗಿ ಶಾಶ್ವತ ನಿಧಿಯನ್ನೂ ಸ್ಥಾಪಿಸಿಕೊಂಡು, ಊರ ಪರವೂರ ಭಗವದ್ಭಕ್ತರ ಔದಾರ್ಯದ ಕೊಡುಗೆ ಮತ್ತು ತೊಡಗಿಸಿಕೊಳ್ಳುವಿಕೆಯಿಂದ, ಚೊಕ್ಕಾಡಿಯ ಶ್ರೀರಾಮ ಸನ್ನಿಧಿಯು ಮಾದರಿ ಕ್ಷೇತ್ರವಾಗಿ ರೂಪುಗೊಂಡಿದೆ.
*ದೇರಾಜೆ* *ಸೀತಾರಾಮಯ್ಯನವರು* ದೇವಸ್ಥಾನದ ಸ್ಥಾಪಕಾಧ್ಯಕ್ಷರಾಗಿರುತ್ತಾರೆ. ಪ್ರಸ್ತುತ ಅವರ ಮಗ ಮೂರ್ತಿ ದೇರಾಜೆಯವರು ಗೌರವ ಸದಸ್ಯರಾಗಿ ಆಡಳಿತ ಸಮಿತಿಯಲ್ಲಿ ಇದ್ದಾರೆ.
*ಶ್ರೀರಾಮ ಸೇವಾ* *ಸಮಿತಿ* :
ಅಧ್ಯಕ್ಷರು: ಮಹೇಶ್ ಭಟ್ ಚೂಂತಾರು, ಉಪಾಧ್ಯಕ್ಷರು : ಕೃಷ್ಣಮೂರ್ತಿ ನೇಣಾರು, ಕಾರ್ಯದರ್ಶಿ: ಗಣೇಶ ಕೆ, ಖಜಾಂಜಿ: ಸತ್ಯವೆಂಕಟೇಶ್ ಹೆಬ್ಬಾರ್ ಶೇಣಿ
ಸದಸ್ಯರುಗಳು: ಆನೆಕಾರ ಗಣಪಯ್ಯ, ಸುಧೇಷ್ಣ ದೇರಾಜೆ, ಆದರ್ಶ ನೇಣಾರು, ಶಿವಸುಬ್ರಹ್ಮಣ್ಯ ನಾಟಿಕೇರಿ ,ಕಾರ್ತಿಕೇಶ ಶೇಣಿ,ಕೃಷ್ಣಪ್ರಸಾದ. ಕೆ,ಆಶ್ರಯ ನೇಣಾರು,ಪ್ರಣೀತ ವೆಂಕಟೇಶ ಶರ್ಮಾ,ರಾಮಚಂದ್ರ ಕೋಟೆ,ಅರ್ಚಕರಾಗಿ ರಘುರಾಮ ಶರ್ಮಾ ಇವರನ್ನೊಳಗೊಂಡ ತಂಡವು, ದೇವಳದ ಸಮಗ್ರ ಅಭಿವೃದ್ಧಿಯಲ್ಲಿ ತ್ರಿಕರಣಪೂರ್ವಕವಾಗಿ ತೊಡಗಿಸಿಕೊಂಡಿರುತ್ತಾರೆ.
*ಹೊಸ* *ಆಡಳಿತ* *ವ್ಯವಸ್ಥೆ** :
ದೇವಸ್ಥಾನದ ಅಭಿವೃದ್ಧಿಯಲ್ಲಿ ಹೊಸ ದಿಕ್ಕು ಕಂಡುಕೊಳ್ಳುವ ಸದಾಶಯದೊಂದಿಗೆ, ದೇವಳದ ಆಡಳಿತವನ್ನು, ಭಗವದ್ಭಕ್ತರ ವಿನಂತಿಯ ಮೇರೆಗೆ ಶ್ರ್ರಿಮದ್ರಾಮಚಂದ್ರಾಪುರ ಮಠಾಧೀಶರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು 2002 ರಲ್ಲಿ ವಹಿಸಿಕೊಡಿರುತ್ತಾರೆ. ತದನಂತರ ಶ್ರೀಶ್ರೀಗಳವರ ಮಾರ್ಗದರ್ಶನದಂತೆ 2007ರಲ್ಲಿ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ, ದೇವಸ್ಥಾನದಲ್ಲಿ ಆರಾಧಿಸಲ್ಪಡುತ್ತಿದ್ದ ಮೊದಲಿನ ವಿಗ್ರಹವು ಮೂಲಸ್ಥಾನಕ್ಕೆ ಕೊಡಲ್ಪಟ್ಟು (ಪಂಜದ ಸಮೀಪದ ನಿಡ್ವಳಕ್ಕೆ), ಶ್ರೀಶ್ರೀಗಳವರ ದಿವ್ಯ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ, ಶ್ರೀರಾಮದೇವರ ನೂತನ ವಿಗ್ರಹವು ಪ್ರತಿಷ್ಠಾಪಿಸಲ್ಪಟ್ಟು, ಅಷ್ಟಬಂಧ ಬ್ರಹ್ಮ ಕಲಶೋತ್ಸವವು ಶ್ರೀದೇವಾಲಯದ ತಂತ್ರಿಗಳಾದ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ವೈಭವದಿಂದ ಜರಗಿತು. ನಂತರದ ದಿನಗಳಲ್ಲಿ ದೇವಾಲಯವು ಬಹಳಷ್ಟು ಅಭಿವೃದ್ಧಿ ಯೋಜನೆಗಳೊಂದಿಗೆ, ದೇವಸ್ಥಾನದ ಸಮಗ್ರ ಚಿತ್ರಣವೇ ಬದಲಾಯ್ತು, ಇನ್ನಷ್ಟು ಜನಪರ ನೀತಿಗಳಿಂದ ಜನಾಕರ್ಷಣೆಯ ಕೇಂದ್ರವಾಗಿ ಬೆಳೆದು, ಧಾರ್ಮಿಕದೊಂದಿಗೆ ಸಾಂಸ್ಕೃತಿಕವಾಗಿಯೂ ತನ್ನ ಮೆರುಗನ್ನು ಹೆಚ್ಚಿಸಿಕೊಂಡು ಕೀರ್ತಿಯನ್ನು ವಿಸ್ತರಿಸಿಕೊಂಡಿತು.
*ಸಾಹಿತ್ಯಕ* *ಮತ್ತು* *ಸಾಂಸ್ಕೃತಿಕ* *ಕೇಂದ್ರವಾಗಿ* *ಚೊಕ್ಕಾಡಿ* : ಕವಿಶ್ರೇಷ್ಠ ಸುಬ್ರಾಯ ಚೊಕ್ಕಾಡಿಯಂತಹ ಹಲವು ಬರಹಗಾರರನ್ನು, ಕವಿ ಕಥೆಗಾರರನ್ನು ನಾಡಿಗೆ ನೀಡಿದ ಹೆಗ್ಗಳಿಕೆ ಈ ಊರಿಗಿದೆ. ಅದರಲ್ಲೂ ಯಕ್ಷಗಾನ ಕ್ಷೇತ್ರಕ್ಕೆ ಚೊಕ್ಕಾಡಿಯ ಕೊಡುಗೆ ಬಹಳ ದೊಡ್ಡದು. ಸ್ವತಃ ಕಲಾವಿದರಾದ ದೇರಾಜೆ ಸೀತಾರಾಮಯ್ಯನವರ ನೇತೃತ್ವದಲ್ಲಿ, ಜನಮೆಚ್ಚುಗೆ ಪಡೆದ ಮತ್ತು ಶಾಶ್ವತ ಛಾಪು ಒತ್ತಿದ ಯಕ್ಷನಾಟಕವೆಂಬ ವಿನೂತನ ಪ್ರಯೋಗದ ಇತಿಹಾಸ ಚೊಕ್ಕಾಡಿಗಿದೆ. ಮೊದಲಾದವು
ವಾರ್ಷಿಕ ಪ್ರತಿಷ್ಠಾ ದಿನ, ಶ್ರೀರಾಮ ನವಮಿ, ನವರಾತ್ರಿ ಉತ್ಸವಾದಿಗಳೇ..... ಮೊದಲಾದ ವಿಶೇಷ ಕಾರ್ಯಕ್ರಮಗಳೊಂದಿಗೆ ನಿತ್ಯ ನೈಮಿತ್ತಿಕಗಳು ಅನೂಚಾನವಾಗಿ ನಡೆಯುತ್ತಿವೆ. ಶ್ರೀರಾಮ ದೇವಾಲಯದ ಪ್ರೋತ್ಸಾಹದಲ್ಲಿ ನಡೆಯುತ್ತಿರುವ ಶ್ರೀದೇವಿ ಭಜನಾ ಮಂಡಳಿ ಇದರ ಮಹಿಳಾ ತಂಡದವರಿಂದ ಆಯೋಜನೆಗೊಳ್ಳುತ್ತಿರುವ ಭಜನಾ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಮುದಾಯಿಕ ಜವಾಬ್ದಾರಿಯಲ್ಲಿ ಜರಗುವ ವಿಶೇಷ ಸಾಮಾಜಿಕ ಸಮಾರಂಭಗಳು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮಾವೇಶಗಳು ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಂತಹ ವಿಶಿಷ್ಟ ಕಾರ್ಯಕ್ರಮಗಳಿಗೆ ವೇದಿಕೆ ನೀಡುತ್ತಾ ಬಂದಿದೆ. ಇಂತಹ ಚಟುವಟಿಕೆಗಳಿಗೆ ದೇವಸ್ಥಾನವು ತೆರೆದ ಬಾಗಿಲಿನ ಸ್ವಾಗತ ಮತ್ತು ಸಹಕಾರವನ್ನೂ ನೀಡುವುದಕ್ಕೆ ಸದಾ ಸಿದ್ಧವಾಗಿದೆ.
*ದೇರಾಜೆ* *ಸಂಸ್ಕೃತಿ* *ರಂಗ* :
ಇತ್ತೀಚೆಗೆ ಚೊಕ್ಕಾಡಿಯಲ್ಲಿ "ದೇರಾಜೆ ಸಂಸ್ಕೃತಿ ರಂಗ" ಎಂಬ ಸಾಂಸ್ಕೃತಿಕ ಮತ್ತು ಕಲಾ ಸಂಘಟನೆಯು ಅಸ್ತಿತ್ವಕ್ಕೆ ಬಂದಿದ್ದು ವರ್ಷದುದ್ದಕ್ಕೂ ತಾಳಮದ್ದಲೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಯಕ್ಷಗಾನ ತಾಳಮದ್ದಳೆಯ ವಿಷಯದಲ್ಲಿ ಚೊಕ್ಕಾಡಿಗೆ ಸುದೀರ್ಘ ಇತಿಹಾಸವೇ ಚೊಕ್ಕಾಡಿಗಿದೆ.... ತೆಂಕು ಬಡಗು ಎಂಬ ವ್ಯತ್ಯಾಸವಿಲ್ಲದೆ ಹಳೆಯ ತಲೆಮಾರಿನಿಂದ ತೊಡಗಿ ಹೊಸ ತಲೆಮಾರಿನವರೆಗಿನ ನೂರಾರು ಕಲಾವಿದರು ಇಲ್ಲಿನ ವೇದಿಕೆಯಲ್ಲಿ ಕಲಾ ಪ್ರದರ್ಶನಗಳನ್ನು ನಡೆಸಿಕೊಟ್ಟ ದಾಖಲೆ ಇದೆ. ಸುಮಾರು ಐವತ್ತು ವರ್ಷಗಳ ಹಿಂದಿನ ದಿನಮಾನಗಳಲ್ಲಿ "ಶ್ರೀ ಶಾರದಾ ಪ್ರಸಾದಿತ ಯಕ್ಷನಾಟಕ ಮಂಡಳಿ ಚೊಕ್ಕಾಡಿ" ಎಂಬ ಹವ್ಯಾಸಿ ಸಂಘಟನೆಯನ್ನು ಆರಂಭಿಸಿ, ಚಟುವಟಿಕೆಗಳನ್ನು ಸಂಘಟಿಸಿದ ಚರಿತ್ರೆ ಇಲ್ಲಿಗಿದೆ. ಆ ದಿನಗಳಲ್ಲಿ ದೇರಾಜೆ ಸೀತಾರಾಮಯ್ಯನವರ ನೇತೃತ್ವದಲ್ಲಿ ಯಕ್ಷನಾಟಕ ಪ್ರದರ್ಶಿತವಾಗಿದ್ದುದು ಸಾರ್ವಕಾಲಿಕ ದಾಖಲೆಯಾಗಿದೆ. ಆ ನಂತರದ ದಿನಗಳಲ್ಲಿ ಕರ್ನಾಟಕ ಮತ್ತು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು, ವಿಶೇಷ ಸಾಂಸ್ಕೃತಿಕ ಮತ್ತು ಕಲಾ ಚಟುವಟಿಕೆಗಳನ್ನು ಸಂಘಟಿಸಿದ ಕೀರ್ತಿಯೂ ಈ ಕ್ಷೇತ್ರಕ್ಕೆ ಸಲ್ಲುತ್ತದೆ.
*ಮಾನಿಷಾದ* :
ಈ ಪದವು ರಾಮಾಯಣ ರಚನೆಯ ಹಿನ್ನೆಲೆಯಲ್ಲಿ ವಾಲ್ಮೀಕಿ ಮಹರ್ಷಿಗೆ ಕಾರಣವೂ ಪ್ರೇರಣವೂ ಆದ ಪ್ರಸಂಗವು ರಾಮಾಯಣದಷ್ಟೇ ಸ್ವಾರಸ್ಯವಿದೆ. ಚೊಕ್ಕಾಡಿಯ ಶ್ರೀರಾಮ ಕ್ಷೇತ್ರದ ಇತಿಹಾಸವೂ ವಿಸ್ತಾರವೂ, ಮಹಾ ಋಷಿಗೆ ನೀಡಿದ ಪ್ರೇರಣೆಯಂತೆ, ದೇರಾಜೆ ಸೀತಾರಾಮಯ್ಯನವರು ಈ ಊರಿಗೆ ಬಹುಮುಖೀ ನೆಲೆಯಲ್ಲಿ ನೀಡಿದ ಪ್ರೇರಣೆ ಮತ್ತು ಕೊಡುಗೆ ಅಪೂರ್ವ... ಅನನ್ಯ.
ಒಂದು ಕಾಲದಲ್ಲಿ ಕಿಷ್ಕಿಂಧೆ ಸ್ವರೂಪದ ಸ್ಥಿತಿಯಲ್ಲಿದ್ದ ಶ್ರೀರಾಮ ದೇವಸ್ಥಾನದ ವಠಾರ ಇವತ್ತು ರಾಮ ರಾಜ್ಯ ರೂಪು ತಳೆದ ಚೊಕ್ಕಾಡಿ ಇಂದು ಎಲ್ಲಾ ಆಯಾಮಗಳಲ್ಲೂ ಮಾದರಿಯೆನಿಸಿದೆ.
ದೇವಸ್ಥಾನದ ಪೂರ್ಣ ಆವರಣವು ನಿಸರ್ಗ ಸಹಜತೆಯನ್ನು ಉಳಿಸಿಕೊಂಡು, ಆಧುನಿಕತೆಗೆ ಹೊಂದಿಕೊಳ್ಳುವ ತೆರದಿ, ಪಾರಂಪರಿಕ ಜೀವನ ಮೌಲ್ಯಗಳನ್ನು ಪೋಷಣೆ ಮಾಡುವ ಮತ್ತು ಸನಾತನ ಧರ್ಮ ಮೌಲ್ಯಗಳ ಸಂರಕ್ಷಣಾ ಕೇಂದ್ರವಾಗಿ ಬೆಳೆದಿದೆ ಶ್ರೀರಾಮ ದೇವಾಲಯ.
ಪೂಜಾ ಕಾರ್ಯಗಳಲ್ಲಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯಲ್ಲಿ, ವಿಶೇಷ ಉತ್ಸವಾದಿಗಳಲ್ಲಿ, ಮದುವೆಯೇ ಮೊದಲಾದ ಕಾರ್ಯಕ್ರಮಗಳಿಗೆ ಒದಗಿಸಿಕೊಡುವ ವ್ಯವಸ್ಥೆಗಳಲ್ಲಿ, ಸಾರ್ವಜನಿಕ ಸಂಪರ್ಕದಲ್ಲಿ, ಭಗವದ್ಭಕ್ತರ ಮತ್ತು ದಾನಿಗಳ ಸಹಾಯಹಸ್ತ ಸದ್ವಿನಿಯೋಗಗಳಲ್ಲಿ, ಹಣಕಾಸಿನ ವ್ಯವಹಾರದಲ್ಲಿ ಅತ್ಯಂತ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಆದರ್ಶ ವ್ಯವಸ್ಥೆಗಳು ಯಾರನ್ನೇ ಆದರೂ ಚಿತ್ತಾಕರ್ಷಿಸದೆ ಇರದು.
ನಿಸರ್ಗ ಸಹಜತೆಯನ್ನು ಉಳಿಸಿಕೊಂಡು, ಆಧುನಿಕತೆಗೆ ಹೊಂದಿಕೊಳ್ಳುವ ತೆರದಿ, ಪಾರಂಪರಿಕ ಜೀವನ ಮೌಲ್ಯಗಳನ್ನು ಪೋಷಣೆ ಮಾಡುವ ಮತ್ತು ಸನಾತನ ಧರ್ಮ ಮೌಲ್ಯಗಳ ಸಂರಕ್ಷಣಾ ಕೇಂದ್ರವಾಗಿ ಬೆಳೆಸಿಕೊಂಡಿರುವ ಮತ್ತು ವಿಸ್ತಾರವನ್ನು ಪಡೆದಿರುವ ಶ್ರೀರಾಮ ಕ್ಷೇತ್ರ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿರುವುದು ಸಣ್ಣ ಸಂಗತಿಯಲ್ಲ.
ದೇಶದ ಪ್ರಧಾನ ಮಂತ್ರಿ ಮಾನ್ಯ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಪರಿಕಲ್ಪನೆಯ ಧ್ಯೇಯಾದರ್ಶದಂತೆ, ಶುಚಿತ್ವ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ಎನ್ನಬಹುದಾದ ರೀತಿಯಲ್ಲಿ ಕ್ರಮಗಳನ್ನು ದೇವಾಲಯವು ಅಳವಡಿಸಿಕೊಂಡಿದೆ. ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿಯ ಮೂರು ಹೊತ್ತಿನ ಪೂಜಾ ಕಾರ್ಯ ಸೀತಾ, ಲಕ್ಷ್ಮಣ ಸಹಿತದ ಶ್ರೀರಾಮ ದೇವರಿಗೆ ಮತ್ತು ಹನುಮಂತನಿಗೆ ನಿತ್ಯ ನಡೆಯುತ್ತಿದೆ. ಜೊತೆಗೆ ಉಪ ದೇವರುಗಳಾಗಿ ಗಣಪತಿ ಮತ್ತು ದುರ್ಗಾದೇವಿ ಸಾನ್ನಿಧ್ಯವಿದೆ ಇಲ್ಲಿ. ಭಕ್ತರ ಹರಕೆ ಮತ್ತು ಬೇಡಿಕೆಗೆ ಅನುಗುಣವಾಗಿ ಇತರ ಸೇವೆಗಳನ್ನು ಮಾಡಿಸುವರೆ ಅವಕಾಶವಿದೆ.
*ಸೇವಾಸಕ್ತರಿಗೆ* *ಮುಕ್ತ* *ಅವಕಾಶ* :
ಅಭಿವೃದ್ಧಿಗೆ ಎಂದೂ ಕೊನೆಯಿಲ್ಲ. ಕಾಲ ಕಾಲಕ್ಕೆ ಅನುಗುಣವಾಗಿ ಹಾಗೂ ಜನರ ಆಶೋತ್ತರಳಿಗೆ ಆಡಳಿತ ಮಂಡಳಿಯೂ ಸ್ಪಂದಿಸಿ, ಪ್ರತೀ ವರ್ಷವೂ ಒಂದಲ್ಲ ಒಂದು ನೂತನ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಶ್ರೀರಾಮ ಸೇವಾ ಸಮಿತಿಯು ಆ ನಿಟ್ಟಿನಲ್ಲಿ ಹೊಸ ಕನಸುಗಳನ್ನು ಕಾಣುತ್ತಾ... ಬಿತ್ತುತ್ತಾ, ಅದನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಶ್ರೀರಾಮ ದೇವಾಲಯದ ಭವಿಷ್ಯದ ಅಭಿವೃದ್ಧಿ ಯೋಜನೆಗಳಿಗೆ ಗ್ರಾಮದ ಮಹಾಜನತೆ ಮತ್ತು ದಾನಿಗಳು ಸದಾ ಸ್ಪಂದಿಸಬೇಕೆಂಬುದು... ಸದ್ಯದ ಹಾಗೂ ಎಲ್ಲರ ಆಶಯವಾಗಿದೆ.
*ಮೂಲ ಬರಹ:*
*ರಾಮಕೃಷ್ಣ* *ಭಟ್ಟ* *ಚೂಂತಾರು*