06/01/2017
ಇಂದ್ರದ್ಯುಮ್ನ ಹೇಳಿದ ಸತ್ಯನಾಥೇಶ್ವರನ ಕಥೆ
ಮುಂದುವರಿದ ಭಾಗ- 6
ಸತ್ಯತಪನಾದ ಸಾಧಕನ ಶಿವಾದ್ವೈತದಪರಿಯನ್ನು ಎಷ್ಟು ಹೊಗಳಿದರೂ ಸ್ಕಂದನಿಗೆ ತೃಪ್ತಿಯಿಲ್ಲ. ಸತ್ಯತಪನಾಗಿ ತಪಸ್ಸಿನ ಸಾಧನೆಯನ್ನು ವರ್ಣಿಸುತ್ತಾ, ಸತ್ಯತಪನನ್ನು ಲಿಂಗಾಭೇಧ ಸುಂದರಂ ಎನ್ನುತ್ತಾನೆ. ಸ್ಥಾಣುರೂಪಿಯಾದ ಶಿವನಲ್ಲಿ ತನ್ನ ಮನವನ್ನು ಅರ್ಪಿಸದ ಸತ್ಯತಪನು ಮರದಕೊರಡಿನಂತಾದನು, ನಿಶ್ಚಲನಾದನು. ಬಕುಲಕ್ಷೇತ್ರದ ಪಶುಪಕ್ಷಿಗಳಲ್ಲಿ ಅಷ್ಟೇಕೆ? ಹಿಂಸಮೃಗಗಳಲ್ಲಿ ಸ್ವಭಾವಸಿದ್ಧವಾದ ವೈರವಳಿಯಿತು, ಶಾಂತಿ ನೆಲೆಸಿತು. ಈ ವೈರವು ಅನರ್ಥಕ್ಕೆ ಮೂಲ ಎಂಬುದನ್ನು ಅರ್ಥೈಸಿಕೊಂಡಂತೆ ಪಶು-ಪಕ್ಷಿಗಳಿಗೂ ಕೂಡ ಸ್ವಭಾವಸಿದ್ಧವಾದ ವೈರವನ್ನು ಮರೆತವು. ಮದ್ದಾನೆಯು ತನ್ನ ಸೊಂಡಿಲಿನಿಂದ ಸಿಂಹವನ್ನು ತುರಿಸುವುದೆಂದರೇನು.? ಶರಭದೊಡನೆ ಸಿಂಹವು ಆಟವಾಡುವುದೇನು, ನವಿಲಿನ ಕುತ್ತಿಗೆಗೆ ಜೋತುಬಿದ್ದ ಸರ್ಪಗಳೇನು. ಬಕುಲಕ್ಷೇತ್ರದಲ್ಲಿ ಪಶು-ಪಕ್ಷಿಗಳಿಗೂ ಜ್ಞಾನ ನಿಷ್ಠರಾದಂತೆ ಇದ್ದೆ. ಶರೀರದ ಅಂಗಾಂಗಗಳಲ್ಲಿ ಕಾಮವು ಹೇಗೆ ತಾನೆ ತಲೆಯೆತ್ತೀತು, ಮೋಕ್ಷಕ್ಕೆ ಮಾಲೆ ಹಾಕಿದ ಮೇಲೆ. ಪರಿಸರವನ್ನೇ ಪ್ರಭಾವಿಸುವ ಇಂತಹ ಶ್ರೇಷ್ಠವಾದ ತಪಸ್ಸಿಗೆ ಶಿವ ಮೆಚ್ಚಿದ, ಸಿದ್ಧಿಲಿಂಗದ ಮಧ್ಯದಲ್ಲಿ ಬೆಳಕು ಚಿಮ್ಮಿತು. ಪರಮೇಶ್ವರನ ಪದತಲಕ್ಕೆರಗಿದ ಸತ್ಯತಪನ ಸಂತೋಷಕ್ಕೆ ಪಾರವೇ ಇಲ್ಲ. ಕಣ್ದಣಿಯೆ ನೋಡಿದ, ಮನದುಂಬಿ ಹಾಡಿದ, ಯೋಗಿಹೃತ್ಪದ್ಮ ನಿಲಯಂ ಜಗದ್ಬೀಜಂ ಸನಾತನಂ ಎಂದು ವೇದಾಂತದಲ್ಲಿ ವರ್ಣಿತವಾದಂತೆ, ಪರಮಪದವಾದ ಅಕ್ಷರಸ್ಥಿತಿಯನ್ನು ಅರ್ಥೈಸಿಕೊಂಡು ತಪಸ್ಸಿಗೆ ಒಲಿದೆನೆಂದರೂ ಬಿಡದೇ ಭಕ್ತಿಯಿಂದ ದಂಡ ವತ್ಪ್ರಣಾಮ ಮಾಡಿ, ಆ ಪರಮಾನಂದದಲ್ಲಿ ಕೊಚ್ಚಿ ಹೋಗುತ್ತಾ ಭಗವಂತನನ್ನು ಮನದಣಿಯೆ ಕೊಂಡಾಡ ತೊಡಗಿದನು. ಭಕ್ತಿಯ ಆವೇಶದಲ್ಲಿರುವ ಸತ್ಯತಪ ಮುನಿಗೆ, ಪರಮೇಶ್ವರನು ಬಾಚಿತಬ್ಬಿಕೊಂಡಿದ್ದೂ ಅರಿಯಲಿಲ್ಲ. ಭಕ್ತಿಭಾವ ಸಮನ್ವಿತನಾಗಿ ಸ್ತುತಿಸಿದ.
ಮುಂದುವರಿಯುತ್ತದೆ.........................