10/09/2026
ಶ್ರೀಯುತ ಕೃಷ್ಣಮೂರ್ತಿ ಮಣಗೋಡು ಭೀಮಯ್ಯ ಇವರು ನಿನ್ನೆ ದಿನಾಂಕ 09-09-2026ರ ಬುಧವಾರದಂದು ರಾತ್ರಿ 10-45ಕ್ಕೆ ದೈವಾದೀನರಾಗಿರುತ್ತಾರೆ. ಶ್ರೀಯುತರು 1985ನೇ ಇಸವಿಯಿಂದ ಶ್ರೀ ಶ್ರೀಧರ ಸೇವಾ ಮಹಾಮಂಡಲದ ಅಧ್ಯಕ್ಷರಾಗಿದ್ದ ಶ್ರೀ ಕೆ.ವಿ.ಶಂಕರನಾರಾಯಣರಾವ್ ಮತ್ತು ಕಾರ್ಯದರ್ಶಿಯವರಾದ ಶ್ರೀ ಎಸ್.ಟಿ.ಸುಬ್ಬಣ್ಣ ಇವರ ಜೊತೆಗೂಡಿ ಶ್ರೀ ಶ್ರೀಧರ ಸೇವಾ ಮಹಾಮಂಡಲದ ಲೆಕ್ಕಪತ್ರಗಳನ್ನು ತಾವೇ ಸ್ವತಃ ಬರೆದು ಹಲವಾರು ವರ್ಷಗಳ ಕಾಲ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಇಡಲು ಸಹಕರಿಸಿರುತ್ತಾರೆ. ಅಲ್ಲದೇ ಪ್ರತಿವರ್ಷವು ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ಮಾಡಿಸಿ ಸರ್ವಸದಸ್ಯರ ಸಭೆಯಲ್ಲಿ ಮಂಡಿಸಲು ಮುದ್ರಣಾದಿಗಳನ್ನು ಮಾಡಿಸಿ, ಸಭೆಯಲ್ಲಿ ಮಂಡಿಸಿ ಮತ್ತು ಅವುಗಳ ಬಗ್ಗೆ ಸಮರ್ಪಕ ವಿವರಣೆಗಳನ್ನು ನೀಡುತ್ತಿದ್ದರು. ತಮ್ಮ ಈ ಸೇವಾ ಕಾರ್ಯಗಳನ್ನು ಶ್ರೀ ಶ್ರೀಧರ ಸೇವಾ ಮಹಾಮಂಡಲದಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಮಾಡಿರುತ್ತಾರೆ. ಅವರು ಅಂದು ಲೆಕ್ಕಪತ್ರಗಳ ದಾಖಲಿಸಲು ಹಾಕಿಕೊಟ್ಟ ಬುನಾದಿ ಇಂದಿಗೂ ನಡೆಯುತ್ತಾ ಬಂದಿರುತ್ತದೆ. ಶ್ರೀಯುತರು ಪತ್ನಿ ಮತ್ತು ಒರ್ವ ಪುತ್ರಿ, ದೊಡ್ಡ ಕುಟುಂಬ ಮತ್ತು ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.
ಶ್ರೀಯುತರ ಆತ್ಮಕ್ಕೆ ಶಾಂತಿಯನ್ನು ಅನುಗ್ರಹಿಸಲೆಂದು ಮತ್ತು ಶ್ರೀಯುತರ ದುಃಖತಪ್ತ ಕುಟುಂಬಕ್ಕೆ ಇವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅನುಗ್ರಹಿಸಲೆಂದು ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳವರ ಪಾದಪದ್ಮಗಳಲ್ಲಿ ಶ್ರೀ ಶ್ರೀಧರ ಸೇವಾ ಮಹಾಮಂಡಲವು ತನ್ನ ಪ್ರಾರ್ಥನೆಯನ್ನು ಸಲ್ಲಿಸುತ್ತದೆ.
ಶ್ರೀ ಶ್ರೀಧರ ಸೇವಾ ಮಹಾಮಂಡಲ(ರಿ.)
ಶ್ರೀ ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರ