04/08/2023
ಹಾಗೆ ನೋಡಿದರೆ ಮಯ್ಯರು ತುಂಬಾ ಆಪ್ತರೇನಲ್ಲ ನನಗೆ. ವರ್ಷಕ್ಕೆ ಒಂದು ನಾಲ್ಕೈದು ಸಲ ಹೋಗುವ ಪೊಳಲಿ ದೇವಸ್ಥಾನದಲ್ಲಿ ಪರಿಚಯ ಇದ್ದವರು.. ದೇವಸ್ಥಾನದ ಹಣ್ಣುಕಾಯಿ ಮಾಡಿಸುವಲ್ಲಿ ಕುಳಿತು ತಮ್ಮ ನಿಷ್ಕಲ್ಮಶ ನಗೆ ಬೀರುತ್ತಾ..ಏನಿಯಾ? ಸೌಖ್ಯವಾ? ....ಹಾ..ಸೌಖ್ಯ ಮಯ್ಯರೇ ಅಂದಾಗ ಯಜಮಾನ್ರ್( ನನ್ನ ತಂದೆಯವರನ್ನು ಅವರು ಸಂಬೋಧಿಸುತ್ತಿದ್ದದ್ದು ಹಾಗೆ) ಹೆಂಗಿದ್ರ್? ಅವರು ಸ ಸೌಖ್ಯ ಅನ್ನುವುದರಲ್ಲಿ ನಮ್ಮ ಮಾತುಕತೆ ಮುಗಿಯುತ್ತಿತ್ತು.
ಇಂತಹಾ ಸಂಬಂಧದಲ್ಲಿದ್ದ ನನಗೆ ಯಾಕೆ "ಮಯ್ಯರು ಇನ್ನಿಲ್ಲ "ಅನ್ನುವುದು ಯಾಕೆ ಕಾಡುತ್ತಿದೆ ಅನ್ನುವುದು? ಅವರ ನಿಷ್ಕಲ್ಮಶ ನಿಗರ್ವೀ ಸರಳತೆ ಅನ್ನುವುದಂತೂ ಸತ್ಯ.
ಜಾತ್ರೆಯ ಸಮಯದಲ್ಲಿ ದೇವರ ಬಲಿಮೂರ್ತಿಯನ್ನು ಹೊರುತ್ತಿದ್ದವರು ಅವರು. ಪೊಳಲಿ ಸುಬ್ರಮಣ್ಯನ ಬಲಿಮೂರ್ತಿ ಅಂದರೆ ಸಾಮಾನ್ಯದ ಮಾತಂತೂ ಅಲ್ಲ.( ಒಂದು ಮುಡಿಯಷ್ಟು- ನಲವತ್ತು ಕೆಜಿ ಯಷ್ಟು ಭಾರ ಅಂತ ಪ್ರತೀತಿ). ಅಂತಹಾ ಬಲಿಮೂರ್ತಿಯನ್ನು ಹೊತ್ತು ಕಡೆಚೆಂಡಿನ ದಿವಸದಂದು ರಾತ್ರಿ11ಗಂಟೆಗೆ ಶುರು ಮಾಡಿದರೆ ಬೆಳಗಿನ ಜಾವದವರೆಗೂ ತಾಧ್ಯಾತ್ಮದಲ್ಲಿ ಹೊತ್ತು ಸಾಗುವುದು ಜನಸಾಮಾನ್ಯರಾದ ನಮ್ಮ ಎಣಿಕೆಗೆ ಸಿಗಲಿಕ್ಕಿಲ್ಲ.
ಅದರಲ್ಲೂ ಮಾಧವ ಮಯ್ಯರ ಬಲಿ ಅಂದರೆ..ಅದಕ್ಕೆ ಅದೇ ಸಾಟಿ.ಅವರಿಗೆ ಅವರೇ ಸಾಟಿ.🙏
ಚಂಡೆ ಸುತ್ತಿನ ಬಲಿಯಲ್ಲಿ ಕೊಡಿ ಮರದ ಎದುರು ನಿಂತು ಬಲಿಮೂರ್ತಿಯನ್ನು ಹೊತ್ತುಕೊಂಡು ಮಯ್ಯರ ಇಡೀ ದೇಹ ನಡುಗುತ್ತಿದ್ದದ್ದು, ಅದಕ್ಕೆ ತಕ್ಕಂತೆ ಬಲಿಮೂರ್ತಿಯ ಸತ್ತಿಗೆ ಇನ್ನೇನು ಕೆಳಗೆ ಬಿದ್ದೀತು ಅನ್ನಿಸುವ ಮಟ್ಟಿಗೆ ಅಲುಗಾಡುತ್ತಿದ್ದದ್ದು ಮಯ್ಯರ ಬಲಿನೋಡಿದವರಾರೂ ಮರೆಯಲಿಕ್ಕಿಲ್ಲ.
ಅದೇ ಚಂಡೆಸುತ್ತಿನಲ್ಲಿ ಅರ್ಧ ನಿಮೀಲಿತ ನೇತ್ರರಾಗಿ , ಚಂಡೆ,ಡೋಲು, ಕೊಂಬು ಕಹಳೆಯನಾದದಲ್ಲಿ , ನುಡಿಸುವವರ ಬಳಿಸಾಗಿ, ಒಮ್ಮೆಲೇ ಹಿಂದೆ ಬರುತ್ತಿದ್ದ ರೀತಿ, ಹಾಗೆ ವೇಗವಾಗಿ ಹಿಂದೆ ಬಂದು ಬಲಮುಂಗಾಲನ್ನೆತ್ತಿ ಪುನಃ ಮುಂದೆ ಸಾಗುತ್ತಿದ್ದ ರೀತಿ..ನೋಡಿದವರ ಕಣ್ಣಿಗೆ ಕಟ್ಟಿದಂತೆ ಇದ್ದೀತು. ಆ ವೇಗ, ಆ ತನ್ಮಯತೆ.. ಆ ರೀತಿ ಹಿಂಬರುತ್ತಿದ್ದ ರೀತಿ..ಇನ್ನೇನು ಮಯ್ಯರು ಬಲಿಮೂರ್ತಿಯನ್ನು ಕೆಳಗೆ ಹಾಕಿದರು ಅನ್ನುವ ಭಯವನ್ನು ನೋಡುಗರಲ್ಲಿ ಹುಟ್ಟುಹಾಕಿಸುತ್ತಿದ್ದದ್ದು ಸುಳ್ಳಲ್ಲ.
ಎಲ್ಲಿಯವರೆಗೆ ಅಂದರೆ ಇಡೀ ಭಾರತದಲ್ಲೇ ಪೊಳಲಿ ದೇವರ ರೀತಿಯ ಉತ್ಸವ ಬಲಿ ಇರಲಿಕ್ಕಿಲ್ಲ( ಇದು ಸತ್ಯವೇ. ಯಾವ ದೇವಸ್ಥಾನಗಳಲ್ಲೂ ಪೊಳಲಿ ಬಲಿಯ ಗಾಂಭೀರ್ಯತೆ, ಅಲೌಕಿಕತೆಯನ್ನು ಮೀರಿಸುವ ಉತ್ಸವ ಬಲಿ ಇಲ್ಲ). ಮಾಧವ ಮಯ್ಯರ ಬಲಿಯಷ್ಟು ಚಂದದ್ದು ಇತ್ತೀಚಿನ ವರ್ಷಗಳಲ್ಲಿ ಇಲ್ಲ ಅನ್ನಿಸುವಷ್ಟು.
ಇಷ್ಟೇ ಕಾರಣವಾ ? ಮಾಧವ ಮಯ್ಯರು ಇನ್ನಿಲ್ಲ ಅನ್ನುವುದು ಬಿಟ್ಟೂ ಬಿಡದೇ ಕಾಡಲು?.....
ಕಡೆಚೆಂಡಿನ ಉತ್ಸವ ಬಲಿಯ ದಿನದಂದು, ಬಲಿಮೂರ್ತಿಯ ಬಲಿ ಆದ ಮೇಲೆ ಶ್ರೀದೇವರಿಗೆ ಹದಿನಾರು ಸಲ ಪಲ್ಲಕ್ಕಿ ಸುತ್ತಾಗುವುದು ರೂಢಿ. ಆಗ ಮಯ್ಯರು ಕುಳಿತುಕೊಳ್ಳುತ್ತಿದ್ದದ್ದು ವಸಂತಕಟ್ಟೆಯ ಬಳಿಯಲ್ಲಿ. ಹಾಗೆ ಕುಳಿತಿದ್ದ ಮಯ್ಯರನ್ನು ಒಂದು ಸಲ ಮಾತಿಗೆಳೆದಿದ್ದೆ.
"ಏನ್ ಮಯ್ಯರೇ..ಬಚ್ಚ್ ತಾ"? ( ಏನು ಮಯ್ಯರೇ ಆಯಾಸ ಆಗ್ತಿದೆಯಾ? ಅಂತ)
ಆಗ ಅವರು ಕೊಟ್ಟ ಉತ್ತರ ಅವರ ಮೇರುಸದ್ರಷ ವ್ಯಕ್ತಿತ್ವದ ದರ್ಶನವನ್ನು ಮಾಡಿಸಿತ್ತು.
" ನಾನ್ ಸುಬ್ರಮಣ್ಯನ ಹೊತ್ತ್ ಬಲಿ ಮಾಡ್ತೆ ಅಂದ್ರೆ ನಂಗೆ ಬಚ್ಚ್ ತ್. ಅವ ನನ್ನಿಂದ ಹೊರ್ಸಿಂತ ಅಂತ ಅಲೋಚನೆ ಮಾಡ್ರೆ ಬಚ್ಚೆಲ್ ಇಲ್ಲೆ. ನಾನ್ ಬೇಡ ಅಂತಾದ್ರೆ ಅವ ಬೇರೆ ಜನ ಹುಡ್ಕಿಂತ. ಶಾಶ್ವತ ಅವ ನಾನಲ್ಲ. ಅವ ಹೊರ್ಸಿಂತ ವರೆಗೆ ಹೊರ್ತ್ ದ್" ಅಂದಿದ್ದರು( ನಾನು ಸುಬ್ರಹ್ಮಣ್ಯನನ್ನು ಹೊತ್ತು ಬಲಿ ಮಾಡುತ್ತೇನೆ ಅಂದರೆ ನನಗೆ ಆಯಾಸ. ಅವ ನನ್ನಿಂದ ಹೊರಿಸಿಕೊಳ್ಳುತ್ತಾನೆ ಅಂತ ಆಲೋಚಿಸಿದರೆ ಆಯಾಸ ಇಲ್ಲ.ನಾನು ಬೇಡ ಅಂತ ಅವನಿಗೆ ಕಂಡರೆ ಅವ ಬೇರೆ ಜನರನ್ನು ಹುಡುಕಿಕೊಳ್ಳುತ್ತಾನೆ .ಶಾಶ್ವತ ಅವನೇ..ನಾನಲ್ಲ. ಅವ ಎಲ್ಲಿಯವರೆಗೆ ಹೊರಿಸಿಕೊಳ್ಳುತ್ತಾನೆ ಅಲ್ಲಿಯವರೆಗೆ ಹೊರುವುದು)
ನನಗಾಗ ಬರಿಯ ಮಯ್ಯರು ಕಾಣಿಸಿರಲಿಲ್ಲ. ಸರ್ವವನ್ನೂ ಆ ಆದಿಮಾಯೆಗೆ, ಆ ಸುಬ್ರಹ್ಮಣ್ಯನಿಗೆ ಅರ್ಪಿಸಿ ಶರಣಾಗತನಾದ
ಒಬ್ಬ ತಪಸ್ವೀ, ಒಬ್ಬ ಯೋಗಿಯಷ್ಟೇ ಕಾಣಿಸಿದ್ದು.🙏
ಇಂತಹಾ ಮಯ್ಯರು ಇನ್ನಿಲ್ಲ ಲೌಕಿಕವಾಗಿ.
ಆದರೆ ಅವರ ಎತ್ತರದ ಗೌರವಯುತ ವ್ಯಕ್ತಿತ್ವವಂತೂ ನೆನಪುಗಳಲ್ಲಿ ಶಾಶ್ವತ..🙏🙏
from
Sushruth Addoor