12/02/2015
ಅಜಿಲಮೊಗರು.
ಬಂಟ್ವಾಳ ತಾಲೂಕಿನ ನೇತ್ರಾವತಿ ನದಿ ತೀರದಲ್ಲಿ ಇರುವ ಊರು. ಅಜಿಲಮೊಗರು ಎಂದರೆ ಅದೊಂದು ಧಾರ್ಮಿಕ ಶ್ರದ್ಧಾ ಕೇಂದ್ರಕ್ಕಿರುವ ಇನ್ನೊಂದು ಹೆಸರು. ಐತಿಹಾಸಿಕ ಅಜಿಲಮೊಗರು ಮಸ್ಜಿದ್ ಎಂದರೆ ಸುತ್ತಮುತ್ತಲಿನ ಊರಿಗೂ ಚಿರಪರಿಚಿತ. ಅದೇ ರೀತಿ ಅದಕ್ಕೆ ಅಭಿಮುಖವಾಗಿ ಕಡೇಶಿವಾಲಯ ದೇವಾಲಯ ಕೂಡ ಇದೆ. ಈ ಎರಡು ಧಾರ್ಮಿಕ ಕೇಂದ್ರಗಳಿಗೆ ಐತಿಹಾಸಿಕ ಹಿನ್ನೆಲೆಯೂ ಇದೆ.
ಸುಮಾರು ೭೦೦ ವರ್ಷಗಳ ಇತಿಹಾಸವಿರುವ ಅಜಿಲಮೊಗರು ಮಸ್ಜಿದ್ ಮಾಲಿದ ಎಂಬ ಧಾರ್ಮಿಕ ಸಂಭ್ರಮಕ್ಕೆ ಹೆಸರಾದ ಹೆಸರು. ಮಾಲಿದಾ ಹರಕೆ ಎಂಬ ಆಚರಣೆ ವರ್ಷಂಪ್ರತಿ ದಿನಗಳಲ್ಲಿ ಇಲ್ಲಿ ನಡೆಯುತ್ತದೆ. ಆವಾಗ ಬೇರೆ ಬೇರೆ ರಾಜ್ಯಗಳಿಂದ ಈ ಮಸೀದಿಗೆ ಭಕ್ತಾದಿಗಳು ಆಗಮಿಸುತ್ತಾರೆ.
ನದಿ ತೀರದಲ್ಲಿ ಮಸ್ಜಿದ್ ನಿರ್ಮಾಣಗೊಂಡಿರುವುದಕ್ಕೆ ಒಂದು ಇತಿಹಾಸವಿದೆ. ಇತಿಹಾಸದ ಪುಟಗಳನ್ನು ತಿರುವಿದಾಗ ಸ್ವಾರಸ್ಯಕರ ಸಂಗತಿಗಳು ಬೆಳಕಿಗೆ ಬರುತ್ತವೆ. ಸುಮಾರು ೭೦೦ ವರ್ಷಗಳ ಇತಿಹಾಸವಿರುವ ಅಜಿಲಮೊಗರು ಮಸ್ಜಿದ್ ಹಾಗೂ ಕಡೇಶಿವಾಲಯ ಚಿಂತಾಮಣಿ ನರಸಿಂಹ ದೇವಾಲಯ ಎಂಬ ಎರಡು ಧಾರ್ಮಿಕ ಕೇಂದ್ರಗಳು ನೇತ್ರಾವತಿ ನದಿಯ ಎರಡು ದಂಡೆಗಳಲ್ಲಿದೆ. ಇರಾನ್‌ನ ಸಿಸ್ಥಾನ ದೇಶದ ರಾಜ್ಯಾಭಾರ ನಡೆಸುತ್ತಿದ್ದ ಸಯ್ಯಿದ್ ಹುಸೈನ್ ಇಬ್‌ನು ಅಬುಲ್ ಖಾಸಿಮ್ ಎಂಬವರ ಪುತ್ರ ಸಯ್ಯಿದ್ ಬಾಬಾ ಫಕ್ರುದ್ದೀನ್(ನ.ಮ.)ರವರು ಇಲ್ಲಿ ಮಸ್ಜಿದ್ ನಿರ್ಮಿಸಿದರು ಎಂದು ಹೇಳಲಾಗುತ್ತದೆ.
೨೫ನೆ ವರ್ಷದಲ್ಲಿ ತಂದೆಯನ್ನು ಆಗಲಿದ ಫಕ್ರುದ್ದೀನ್‌ರವರು ಎಳೆಯ ವಯಸ್ಸಿನಲ್ಲಿಯೇ ರಾಜ್ಯಾಭಾರದ ಜವಾಬ್ದಾರಿಯನ್ನು ಹೊರಬೇಕಾಯಿತು. ೪೦ ವರ್ಷದವರೆಗೂ ರಾಜ್ಯಾಭಾರ ನಡೆಸಿದ ಅವರಿಗೆ, ಕೇವಲ ಸಿಂಹಾಸನದಲ್ಲಿ ಕೂರಿದ ಮಾತ್ರಕ್ಕೆ ಜನರ ಸೇವೆ ನಡೆಸಲು ಹಾಗೂ ಜನರ ಬಳಿಗೆ ತಲುಪಲು ಸಾಧ್ಯವಾಗುವುದಿಲ್ಲ ಎಂಬ ಅರಿವು ಮೂಡಿತು.
ಅಂದಿನಿಂದ ವಿಶ್ವ ಸಂಚಾರ ಆರಂಭಿಸಿದರು. ದಾರಿಯುದ್ದಕ್ಕೂ ಧರ್ಮ ಬೋಧನೆ ನಡೆಸುತ್ತಾ ಸಾಗಿದರು. ಜನರಲ್ಲಿದ್ದ ಅನೀತಿ, ಅಂಧಾಕರ, ಮೂಢನಂಬಿಕೆಗಳನ್ನು ನಿವಾರಿಸಲು ಪ್ರಯತ್ನಿಸಿದರು. ೭ನೆ ಶತಮಾನದಲ್ಲಿ ಭಾರತಕ್ಕೆ ಕಾಲಿಟ್ಟ ಅವರು, ತನ್ನಲ್ಲಿದ್ದ ಜ್ಞಾನವನ್ನು ಧಾರೆಯೆರೆದರು. ಹೀಗೆ ಧರ್ಮ ಪ್ರಚಾರ ನಡೆಸುತ್ತಾ ಅವರು ಬಂದದ್ದು ಅಜಿಲಮೊಗರು ಎಂಬಲ್ಲಿಗೆ . ಸಂಚಾರ ಸೌಕರ್ಯವಿಲ್ಲದ ಅಂದಿನ ಕಾಲದಲ್ಲಿ ಜನರು ಹಸಿವಿನಿಂದ ಬಳಲುತ್ತಿದ್ದರಂತೆ.
ಬರುತ್ತಾ ಬೆಳ್ತಿಗೆ, ತುಪ್ಪ, ಬೆಲ್ಲದಿಂದ ತಯಾರಿಸಿದ ವಿಶಿಷ್ಟ ತಿನಿಸನ್ನು ಅವರು ಈ ಸಂದರ್ಭದಲ್ಲಿ ಸ್ಥಳೀಯ ಜನರಿಗೆ ಪರಿಚಯಿಸಿದರು. ಅದರ ಹೆಸರು ಮಾಲಿದಾ ಎಂಬುದಾಗಿತ್ತು ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಈ ಪ್ರದೇಶದಲ್ಲಿ ಅವರು ಮಸ್ಜಿದನ್ನು ನಿರ್ಮಿಸಿದರು. ಅದಕ್ಕೆ ಇಮಾಮರಾಗಿ ತನ್ನ ಶಿಷ್ಯ ಹಝ್ರತ್ ಝಕರಿಯ್ಯಾ(ನ.ಮ.)ರವರನ್ನು ನಿಯೋಜಿಸಿದರು ಎಂಬುದು ಇತಿಹಾಸ.
ಫಕ್ರುದ್ದೀನ್(ನ.ಮ.)ರವರು ಅಜಿಲಮೊಗರುವಿಗೆ ಬಂದ ಸಂದರ್ಭದಲ್ಲಿ ಇಲ್ಲಿ ಜೈನ ರಾಜರು ಇದ್ದರಂತೆ. ಅವರು ಚೆನ್ನಮ್ಮ ರಾಣಿಯ ನಿಕಟವರ್ತಿಗಳಾಗಿದ್ದರು. ಅವರೇ ಇಲ್ಲಿ ಮಸ್ಜಿದ್ ಕಟ್ಟಲು ಸ್ಥಳ ನೀಡಿದರು. ಮಾತ್ರವಲ್ಲ, ಚೆನ್ನಮ್ಮ ರಾಣಿಗೆ ಇಲ್ಲಿನ ಜೈನರಾಜರು ಕಪ್ಪಕಾಣಿಕೆಯನ್ನು ಸಲ್ಲಿಸುತ್ತಿದ್ದರಂತೆ. ಅಜಿಲಮೊಗರು ಮಸ್ಜಿದ್‌ಗೆ ನೇರವಾಗಿ ತೀರದ ಇನ್ನೊಂದು ಬದಿಯಲ್ಲಿ ಲಕ್ಷ್ಮೀನರಸಿಂಹ ಚಿಂತಾಮಣಿ ದೇವಾಲಯ ಇದೆ.
ಒಂದು ಮೂಲದ ಪ್ರಕಾರ, ಫಕ್ರುದ್ದೀನ್(ನ.ಮ.) ಹಾಗೂ ನರಸಿಂಹ ಎಂಬವರು ಈ ಪ್ರದೇಶಕ್ಕೆ ಜೊತೆಯಲ್ಲೇ ಬಂದಿದ್ದರು ಎಂಬ ಪ್ರತೀತಿ ಇದೆ. ನದಿ ದಾಟಲು ನರಸಿಂಹ ಹಿಂಜರಿದ ಕಾರಣ, ತೀರದ ಈ ಬದಿಯಲ್ಲಿ ದೇವಾಲಯ ಹಾಗೂ ತೀರದ ಆಚೆ ಬದಿಯಲ್ಲಿ ಮಸ್ಜಿದ್ ನಿರ್ಮಾಣವಾಯಿತು ಎಂದು ಹೇಳಲಾಗುತ್ತದೆ.
ಹೀಗೆ ಅಜಿಲಮೊಗರು ಎಂಬಲ್ಲಿ ಮಸ್ಜಿದ್ ನಿರ್ಮಿಸಿ ಅದಕ್ಕೆ ಬೇಕಾದ ಸೌಕರ್ಯಗಳನ್ನು ಕಲ್ಪಿಸಿ, ಫಕ್ರುದ್ದೀನ್(ರ.ಅ.)ರವರು ದೇಶ ಸಂಚಾರದಲ್ಲಿ ತೊಡಗಿದರು. ಬಳಿಕ ಇವರು ಆಂಧ್ರದ ಪೆನಗುಂಡ ಎಂಬಲ್ಲಿನ ಕ್ರಿ.ಶ. ೧೨೯೪ರಲ್ಲಿ ಇಹಲೋಕ ತ್ಯಜಿಸಿದರು. ಮೈಸೂರು ಹುಲಿ ಟಿಪ್ಪುಸುಲ್ತಾನ್‌ರವರ ಕಾಲದಲ್ಲಿ ಅಜಿಲಮೊಗರು ಮಸ್ಜಿದ್‌ನ ಜೀರ್ಣೊದ್ದಾರ ಪ್ರಕ್ರಿಯೆ ನಡೆದಿತ್ತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.