10/07/2026
🔥ಕುಡುಪು ಶ್ರೀ ಪಂಚ ಧೂಮಾವತಿ🔥
ತುಳುನಾಡಿನ ಕುಡುಪು ಶ್ರೀ ಅನಂತ ಪದ್ಮನಾಭ ಕ್ಷೇತ್ರದ ತಂತ್ರಿಗಳು ಆಗಿರುವ ಪೂಜ್ಯ 'ಕುಡುಪು ಶ್ರಿ ನರಸಿಂಹ ತಂತ್ರಿಯವರ ಮನೆತನದ ಹಿರಿಯರಿಂದ ಆರಾಧಿಸಿಕೊಂಡು ಬಂದಿರುವ ಪೂರ್ವ ಪರಂಪರೆಯ ಶ್ರೀ ಪಂಚ ಧೂಮಾವತಿ. ಅತೀ ವಿರಳ ಹಾಗು ತನ್ನದೇಯಾದ ವೈಶಿಷ್ಠ್ಯವನ್ನೊಳಗೊಂಡ ೭'ಅಡಿ ಎತ್ತರದ ಭವ್ಯ ಪಂಚ ಧೂಮಾವತಿ ಮರದ ವಿಗ್ರಹ.
ತಂತ್ರಿ ಮನೆತನದವರು ಅನಾದಿ ಕಾಲದಿಂದಲೂ ಆರಾಧಿಸಲ್ಪಡುತ್ತಿರುವ ಈ ೭'ಅಡಿ ಎತ್ತರದ ಭವ್ಯ ಮೂರ್ತಿಯು ಹಿಂದೆ ಪ್ರಾಚೀನ ಕಾಲದಲ್ಲಿ ರೌದ್ರ ರೂಪದಲ್ಲಿತ್ತು.
ತನ್ನ ಜೀರ್ಣೋದ್ಧಾರಕ್ಕೆ ಮುನ್ನುಡಿಯೋ ದೈವಚಿತ್ತವೋ ಎಂಬಂತೆ ೪೯ವರ್ಷಗಳ ಹಿಂದೆ ದೈವೇಚ್ಛೆಯಂತೆ ನೂತನ ದೈವಸ್ಥಾನವನ್ನು ನಿರ್ಮಿಸುವ ಸಂಕಲ್ಪದಿಂದ ದೈವಸ್ಥಾನಕ್ಕೆ ಶಿಲಾನ್ಯಾಸಗೈದು 'ಕರ್ಕಾಟಕ ಮಾಸ ಪುಷ್ಯ ನಕ್ಷತ್ರ ತಾ. ೨೦-೬-೧೯೭೭'ರ ಸೋಮವಾರ'ದಂದು ನೂತನ ದೈವಸ್ಥಾನದಲ್ಲಿ ಸೌಮ್ಯಯುತವಾದ ಶಾಂತ ಸ್ವರೂಪದ ಸುಂದರವಾದ ೭'ಅಡಿ ಎತ್ತರದ ೫' ಮೊಗವುಳ್ಳ ಧೂಮಾವತಿಯ ಮರದ ವಿಗ್ರಹದೊಂದಿಗೆ ಪುನರ್ ಪ್ರತಿಷ್ಠಾಪನೆ ಗೊಳಿಸಲಾಯಿತು.
ವಿಶೇಷವಾಗಿ ಸೌಮ್ಯ ಸ್ವರೂಪದ ಪಂಚಮುಖಿಯಾದ ಧೂಮಾವತಿಯ ಮರದ ವಿಗ್ರಹವನ್ನು ನಮ್ಮ ಕುಡುಪುವಿನ ತಂತ್ರಿವರೇಣ್ಯರ ಮನೆತನವನ್ನು ಹೊರತು ಪಡಿಸಿ ದ.ಕ ಜಿಲ್ಲೆಯಲ್ಲಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ತನ್ನ ಗಾತ್ರದಿಂದ ಅಷ್ಟೇ ಅಲ್ಲ ಕಲಾತ್ಮಕವಾಗಿಯೂ ಮೂರ್ತಿಯು ಅತ್ಯಾಕರ್ಷಕವಾದ ಲಕ್ಷಣಗಳನ್ನು ಹೊಂದಿದೆ.
ಮರದ ಪೀಠದ ಮೇಲೆ ಅಣಿಯನ್ನು ಧರಿಸಿ ವಿರಾಜಮಾನಳಾದ ಪಂಚಮುಖಿ ಧೂಮಾವತಿಯು ಕಡು ಹಸಿರು ವರ್ಣದ ಸೀರೆಯನ್ನು ತೊಟ್ಟು ಗತ್ತು ಗಾಂಭೀರ್ಯದಿಂದ ರಾಜಸ ಸ್ವರೂಪಳಾಗಿ ಆರೂಢಳಾಗಿದ್ದಾಳೆ.
ಸಂಪೂರ್ಣ ವಿಗ್ರಹವು ಮರದಿಂದಲೇ ನಿರ್ಮಾಣವಾಗಿದ್ದು ಕೆತ್ತನೆಯ ವಿನ್ಯಾಸದ ಚಿತ್ತಾರ, ಚೆಲುವು, ಬಣ್ಣದ ವ್ಯವಸ್ಥೆಗಳೆಲ್ಲವೂ ನಮ್ಮನ್ನು ಮೂಕ ವಿಸ್ಮಿತಗೊಳಿಸುತ್ತದೆ.
ವಿಗ್ರಹವು ಪಾರ್ಶ್ವ ಹಾಗು ವಾಮ ಭಾಗದಲ್ಲಿ ತಲಾ ಎರಡೆರಡು ಮೊಗದಿಂದ ಕೂಡಿದ್ದು ಮಧ್ಯಭಾದಲ್ಲಿ
ಪ್ರಧಾನ ವದನಾರವಿಂದವು ಅಭಯ ಸ್ವರೂಪದಿಂದ ಪಂಚಮುಖಿಯಾಗಿ ಧೂಮಾವತಿಯು ಪಂಚಭೂತಗಳನ್ನೂ ತನ್ನ ಅಧೀನ ದಲ್ಲಿರಿಸಿದಂತೆ ವ್ಯಕ್ತಳಾಗುತ್ತಿರುವಳು.
ಐಮೊಗಳಾದ ಈಕೆಯ ಮಸ್ತಕದಲ್ಲಿ ಕಿರೀಟ. ನೀಳ ಕೇಶರಾಶಿ. ಬಿರುಸಾದ ಹುಬ್ಬುಗಳು, ಬ್ರಹ್ಮಾಂಡವನ್ನೇ ಹೋಲುವ ಕಣ್ಗಳು, ಹಣೆಯ ಲಲಾಟದಲ್ಲಿ ಅರ್ಧ ಚಂದ್ರಾಕೃತಿಯ ರಕ್ತವರ್ಣದ ತಿಲಕ. ನಾಸಿಕದಲ್ಲಿ
ವೃತ್ತಾಕಾರದ ನತ್ತು. ಕಿವಿಗಳಲ್ಲಿ ಝುಮಖಿ.
ಶಿರಸ್ಸಿನಲ್ಲಿ ಸರ್ವಾಭರಣಗಳ ರಚನೆ, ವಕ್ಷ ಸ್ಥಳದಲ್ಲಿ ಸ್ವರ್ಣಹಾರವು ಹೊಳೆಯುತ್ತಿದೆ.
ದಶ ಬಾಹು-ಭುಜಳಾದ ಧೂಮಾವತಿಯು ದಶ ಹಸ್ತಗಳಿಂದ ಆವೃತಳಾಗಿ ತನ್ನ ಪ್ರತಿ ಕರಗಳಲ್ಲಿಯೂ ಭಯಾನಕ ಆಯುಧಾದಿಗಳನ್ನು ಧರಿಸಿದ್ದಾಳೆ. ಪ್ರಧಾನವಾಗಿ ಪಾರ್ಶ್ವ ಹಸ್ತದಲ್ಲಿ ಪಟ್ಟದ ಖಡ್ಗವನ್ನೂ, ವಾಮ ಹಸ್ತದಲ್ಲಿ ಘಂಟೆಯನ್ನು ಪಿಡಿದು....ಬಲ ಭಾಗದ ಚತುರ್ಹಸ್ತಗಳಲ್ಲಿ ಕ್ರಮವಾಗಿ "ತರ್ಜನೆ, ರುದ್ರಾಕ್ಷಿ ಜಪಮಣಿ, ಸರ್ಪ, ಶೂಲವನ್ನು ಧರಿಸಿರಲು, ಎಡ ಭಾಗದ ಚತುರ್ಹಸ್ತಗಳಲ್ಲಿ ತ್ರಿಶೂಲ, ಕಪಾಲ ಪಾತ್ರೆ , ತೋಮರ, ಕುಂತಾಯಧ (ಗುರಾಣಿ) ಆಯುಧ ಧಾರಿಣಿಯಾಗಿ ವಿಜೃಂಭಿಸುತ್ತಿದ್ದಾಳೆ. ವಿಶೇಷವಾಗಿ ತಂತ್ರಿ ಮನೆತನದ ಸೇವಾರ್ಥ ಬೆಳ್ಳಿಯ ಖಡ್ಗವು ಸಮರ್ಪಿತಗೊಂಡಿದೆ.
ಧೂಮಾವತಿಯ ಎರಡೂ ಚರಣದ ಪಾದ'ಕಮಲಗಳಲ್ಲಿ ಗೆಜ್ಜೆ ಹಾಗು ಗಗ್ಗರದ ರಚನೆಗಳನ್ನು ಕಾಣಬಹುದಾಗಿದ್ದು ಕಾಲ್ಗಳ ತೋರ್ಬೆರಳು ಹಾಗು ಉಂಗುರ ಬೆರಳ್ಗಳಲ್ಲಿ ಕಾಲುಂಗುರವನ್ನು ವೀಕ್ಷಿಸಬಹುದಾಗಿದೆ.
ಸೋಜಿಗವೆಂಬಂತೆ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಬಳಿದ ವಿಗ್ರಹದ ಬಣ್ಣವು ೪೯❤️' ವರ್ಷವಾದರೂ ಸೊರಗದೆ ಅಚ್ಚಳಿಯದೆ ಇಂದಿಗೂ ಮಿರಮಿರ ಮಿಂಚುತ್ತಿದೆ. ಇದು ಶ್ರೀ ದೈವದ ಕಾರಣೀಕಕ್ಕೆ ಜೀವಂತ ಸಾಕ್ಷಿ.
ಅಲ್ಲದೆ ಐತಿಹ್ಯದಂತೆ ಹಿಂದೆ ಇಲ್ಲಿ ಬ್ರಾಹ್ಮಣ ಅಜ್ಜಿಯೊಬ್ಬರಿದ್ದು ಗರ್ಭಿಣಿ ಸ್ತ್ರೀಯರಿಗೆ ಮದ್ದನ್ನು ನೀಡುತ್ತಿದ್ದರು, ಎನ್ನಲಾಗಿದ್ದು ಇದಕ್ಕೂ ಒಂದು ದಿವ್ಯ ಮೂರ್ತಿಯಿದೆ.
ವಾಡಿಕೆಯಂತೆ ಇಲ್ಲಿ ಪಂಚ ಧೂಮಾವತಿ ದೈವಕ್ಕೆ ನೇಮೋತ್ಸವವು ನಡೆಯುವ ಪದ್ದತಿ ಇರುವುದಿಲ್ಲ. ಆದರೆ ಶ್ರೀ ದೈವಕ್ಕೆ ನಿತ್ಯ ನೈವೇದ್ಯ ಪೂಜೆಯು ನಡೆಯುವುದಲ್ಲದೆ ವಾರ್ಷಿಕ ಪರ್ವ, ಆಷಾಢ ಮಾಸದ ಆಚರಣೆಗಳು ಶ್ರೀ ದೈವಸ್ಥಾನದಲ್ಲಿ ಸುಸಂಪ್ರದಾಯಬದ್ಧವಾಗಿ ನಡೆಯುತ್ತದೆ.
ದುಷ್ಟ ಶಿಕ್ಷಣ-ಶಿಷ್ಟ ರಕ್ಷಣೆಯನ್ನು ನಡೆಸುತ್ತಾ ಹಿನ್ನೆಲೆಯಲ್ಲಿ ಚಂಡಿಕೆಯಂತೆ ರೌದ್ರಳಾದಳೂ ಇಲ್ಲಿ ಸೌಮ್ಯ ಸ್ವರೂಪಳಾದ ಪಂಚಮುಖಿ ಧೂಮಾವತಿಯು ಭಕ್ತರ ಭಕ್ತಿಗೆ ಫಲವನ್ನು ಈಯುತ್ತಾ ಕುಡುಪುವಿನ ಇಷ್ಟ ಪ್ರದಾಯಕಿಯಾಗಿ, ತಂತ್ರಿ ಮನೆತನದ ಅಧಿದೈವವಾಗಿ ಇಲ್ಲಿ ನೆಲೆನಿಂತಿದ್ದಾಳೆ♥
ನಾಗಾರಾಧನೆಯನ್ನು ಒಳಗೊಂಡ ಈ
ಶಕ್ತಿ ಕ್ಷೇತ್ರ ಕುಡುಪುವಿನಲ್ಲಿ ದೈವಾರಾಧನೆಯೊಂದಿಗೂ ಭಕ್ತಾದಿಗಳಲ್ಲಿ ಧಾರ್ಮೀಕ ಶೃದ್ಧೆಯನ್ನು
ವೃದ್ಧಿಸುತ್ತಾ *ಕುಡುಪು ಪಂಚಮುಖಿ ಧೂಮಾವತಿ* ಎಂದೇ ಖ್ಯಾತ ನಾಮರಳಾಗಿ ತನ್ನ ಮರದ ವಿಗ್ರಹದ ವೈಶಿಷ್ಠ್ಯಗಳಿಂದಲೇ ಈಕೆ ಆಸ್ತಿಕರನ್ನು ತನ್ನೆಡೆಗೆ ಬರಮಾಡಿಕೊಳ್ಳುತ್ತಿದ್ದಾಳೆ😁