15/02/2015
ಮಂಡ್ಯ ಜಿಲ್ಲೆಯ ಪ್ರಾತಃಸ್ಮರಣೀಯರು
ಪ್ರಕೃತಿ ಕೃಪೆಗೆ ಪಾತ್ರವಾಗಿ ನೀರು ಮತ್ತು ಸಮೃದ್ಧ ಫಸಲಿನಿಂದ ಕಣ್ಣುಕ್ಕುತ್ತಿರುವ ಮಂಡ್ಯ ಜಿಲ್ಲೆಯ ವಿಕಾಸ ಮತ್ತು ಅಭಿವೃದ್ಧಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್, ಲೆಸ್ಲಿ ಸಿ. ಕೋಲ್ಮನ್ ಮತ್ತು ‘ನಿತ್ಯ ಸಚಿವ’ ಕೆ.ವಿ. ಶಂಕರಗೌಡ ಅವರ ಕೊಡುಗೆ ದೊಡ್ಡದು. ಮಂಡ್ಯ ಜಿಲ್ಲೆಯ ಆರ್ಥಿಕ, ಶೈಕ್ಷಣಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಹೆಜ್ಜೆಗಳನ್ನು ಗುರುತಿಸುವಾಗ ಈ ಐದು ಮಹಾನೀಯರನ್ನು ‘ಮಂಡ್ಯ ಜಿಲ್ಲೆಯ ಶಿಲ್ಪಿ’ಗಳೆಂದು ಗುರುತಿಸಲಾಗುತ್ತದೆ.
ನಾಲ್ವಡಿ ಕೃಷ್ಣರಾಜ ಒಡೆಯರ್:
ಮೈಸೂರು ಸಂಸ್ಥಾನದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಂಡ್ಯ ಜಿಲ್ಲೆಯ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಕಾರಣಕರ್ತರು. ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ (ಕೆಆರ್ ಎಸ್), ಶಿವನಸಮುದ್ರದಲ್ಲಿ (ಬ್ಲಫ್) ಜಲವಿದ್ಯುತ್ ಸ್ಥಾವರ ಸೇರಿದಂತೆ ಅನೇಕ ಪ್ರಥಮಗಳಿಗೆ ಕಾರಣರಾದವರು. ಅಭಿವೃದ್ಧಿ ಕುರಿತಂತೆ ಅವರಿಗಿದ್ದ ದೂರದೃಷ್ಟಿಯ ಪರಿಣಾಮ ಮೈಸೂರು ಜಿಲ್ಲೆಯ ಭಾಗವಾಗಿದ್ದ ಕೆಲ ಪ್ರದೇಶಗಳು ಸೇರಿಕೊಂಡು 1939ರ ಜುಲೈ 1ರಂದು ಮಂಡ್ಯ ಜಿಲ್ಲೆ ಅಸ್ತಿತ್ವಕ್ಕೆ ಬಂತು.
ಸರ್ ಎಂ. ವಿಶ್ವೇಶ್ವರಯ್ಯ:
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಜನಿಸಿದ (1861ರ ಸೆ. 15) ಸರ್ ಎಂ. ವಿಶ್ವೇಶ್ವರಯ್ಯ ಅವರು ಕರ್ನಾಟಕದ ಕಣ್ಮಣಿ. ಬದುಕಿನ ಆರಂಭದಿನಗಳಲ್ಲಿ ಕಠಿಣ ಜೀವನ ನಡೆಸಿದರೂ ತಮ್ಮ ಅಪೂರ್ವ ಪ್ರತಿಭೆ, ನಿಸ್ಸೀಮ ಶ್ರದ್ಧೆಯಿಂದಾಗಿ ಬಹು ಎತ್ತರದ ಸಾಧನೆ ಮಾಡಿದ ಮಹಾನ್ ಚೇತನ. ಕೃಷ್ಣರಾಜಸಾಗರ ಜಲಾಶಯ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಿ, ನಿರ್ಮಾಣ ಮಾಡುವಲ್ಲಿ ಪ್ರಮುಖರು. ಜಿಲ್ಲೆಯ ಬಹುಭಾಗ ಹಸಿರಿನಿಂದ ನಲಿಯುವಂತಾಗಲು ಕಾರಣರಾದ ಸರ್ ಎಂ.ವಿ. ಅವರ ಬಗೆಗೆ ಜನರಿಗೆ ಅಪಾರ ಗೌರವ ಮತ್ತು ಅಭಿಮಾನ. ಅದರ ದ್ಯೋತಕವಾಗಿ ಎತ್ತಿನಬಂಡಿ ಮೇಲೆ, ರೈತನ ಮನೆಮನೆಗಳಲ್ಲೂ ಸರ್ ಎಂ.ವಿ. ಭಾವಚಿತ್ರವಿದೆ. ಜಿಲ್ಲೆಯ ಅಲ್ಲಲ್ಲಿ ಪ್ರತಿಮೆ, ಪುತ್ಥಳಿಗಳೂ ಇವೆ.
ಸರ್ ಮಿರ್ಜಾ ಇಸ್ಮಾಯಿಲ್
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಾಲ್ಯದ ಸಹಪಾಠಿಯಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು 1926 ರಿಂದ 1941ರ ವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದರು. ಈ ಅವಧಿಯಲ್ಲಿ ಮಂಡ್ಯ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಪಥದತ್ತ ಸಾಗಿತು. ನೀರಾವರಿ ಉದ್ದೇಶಗಳಿಗೆ ಸಾಕಷ್ಟು ಒತ್ತು ನೀಡಿದರು. ಹುಲಿಕೆರೆ ಸುರಂಗ (2.8 ಕಿ.ಮೀ), ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಾರ್ಖಾನ್ (ಮೈಷುಗರ್), ಕೆಆರ್ ಎಸ್ ಜಲಾಶಯದ ಬಳಿ ಬೃಂದಾವನ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳು ಇವರ ಕಾಲಾವಧಿಯಲ್ಲೇ ಆದವು.
ಲೆಸ್ಲಿ ಸಿ.ಕೋಲ್ಮನ್:
ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಸರ್ ಮಿರ್ಜಾ ಇಸ್ಮಾಯಿಲ್ ಅವರ ಕನಸು ಸಾಕಾರಗೊಳ್ಳಲು ಲೆಸ್ಲಿ ಸಿ. ಕೋಲ್ಮನ್ ಕಾರಣರು. ಕೃಷಿ ಕ್ಷೇತ್ರದ ಸಂಶೋಧನೆಗಾಗಿ 1908ರಲ್ಲಿ ಮೈಸೂರು ಸಂಸ್ಥಾನಕ್ಕೆ ಆಗಮಿಸಿದ ಕೋಲ್ಮನ್, 1933ರಲ್ಲಿ ಮಂಡ್ಯ ಸಕ್ಕರೆ ಕಾರ್ಖಾನೆ ನಿರ್ಮಾಣಗೊಳ್ಳಲು ಮುಖ್ಯ ಶಿಲ್ಪಿ ಎನ್ನಬಹುದು. ಮಂಡ್ಯ ನಗರದಿಂದ 8 ಕಿ.ಮೀ. ದೂರದಲ್ಲಿರುವ ವಿ.ಸಿ. ಫಾರ್ಮ್ ಬಳಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಯಲ್ಲೂ ಇವರ ಕೊಡುಗೆ ದೊಡ್ಡದು. ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಾವೇರಿ ಮಾತೆ ಪ್ರತಿಮೆ, ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿ ಜೊತೆ ಕೋಲ್ಮನ್ ಅವರ ಪುತ್ಥಳಿಯನ್ನೂ ಸ್ಥಾಪಿಸಲಾಗಿದೆ.
ಕೆ.ವಿ. ಶಂಕರಗೌಡ:
‘ನಿತ್ಯ ಸಚಿವ’ ಎಂದೇ ಜನಮಾನಸದಲ್ಲಿ ನೆಲೆಯೂರಿರುವ ಶಂಕರಗೌಡರು, ಕಳೆದ ನಾಲ್ಕು ದಶಕಗಳಲ್ಲಿ ಶಿಕ್ಷಣ, ಸಹಕಾರ, ಅಭಿವೃದ್ಧಿ ಕ್ಷೇತ್ರದಲ್ಲಿನ ಮಂಡ್ಯ ಜಿಲ್ಲೆ ಪ್ರಗತಿಗೆ ಪ್ರಮುಖ ಕಾರಣರು. ರಂಗಭೂಮಿ ಮತ್ತು ಸಾಹಿತ್ಯದ ಚಟುವಟಿಕೆಗಳಿಗೂ ಸಾಕಷ್ಟು ಉತ್ತೇಜನ ನೀಡಿದರು. ಗೌಡರು, ಹುಟ್ಟುಹಾಕಿದ ಜನತಾ ಶಿಕ್ಷಣ ಸಂಸ್ಥೆ (ಪಿಇಎಸ್) ಇಂದು ಹೆಮ್ಮರವಾಗಿ ಬೆಳೆದಿದ್ದು ಕೋಟ್ಯಂತರ ಮಕ್ಕಳಿಗೆ ಶಿಕ್ಷಣ ಒದಗಿಸಿದೆ, ಒದಗಿಸುತ್ತಿದೆ.