ಕಂಚುಗಲ್ ಬಂಡೆಮಠವು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿದ್ದು ವೀರಶೈವ ಧಾರ್ಮಿಕ ಪರಂಪರೆಯುಳ್ಳ ಮಠವಾಗಿದ್ದು 64 ಶಾಖಾ ಮಠಗಳಿಗೆ ಪ್ರಧಾನ ಮಠವಾಗಿತ್ತು ಬೆಂಗಳೂರಿನಿಂದ 50 ಕಿಲೋ ಮೀಟರ್ ದೂರದಲ್ಲಿರುವ ಈ ಕ್ಷೇತ್ರವು ಸುಂದರವಾಗಿದೆ. ಡಾಬಸ್ಪೇಟೆ - ಗುಡೆಮಾರನಹಳ್ಳಿ ರಸ್ತೆಯಲ್ಲಿರುವ ಬಾಣವಾಡಿ ಗ್ರಾಮದ ದಾಖಲೆಳಿಗೆ ಒಳಪಟ್ಟಿದೆ. ಕಂಚುಗಲ್ ಬಂಡೇಮಠದ ಪಕ್ಕದ ಬೆಟ್ಟದ ಮೇಲಿರೋ ಇತಿಹಾಸ ಪ್ರಸಿದ್ಧ ಪುರಾತನ ಶ್ರೀ ಮಹಾಲಿಂಗೇಶ್ವರ ದೇವಾಲಯ ದ್ರಾವಿಡ ವಾಸ್ತುಶಿಲ್ಪವುಳ್ಳ ರಚನೆಯಾಗಿದೆ. ಶ್ರೀ ಮಹಾಲಿಂ
ಗೇಶ್ವರ ದೇವಾಲಯವು ನಿಸರ್ಗ ನಿರ್ಮಿತವಾದ ಹವಾನಿಯಂತ್ರಿತ ಸ್ಥಳವಾಗಿದೆ.
ಬಂಡೇಮಠ ಸಹಜವಾಗಿಯೇ ಸುತ್ತಲೂ ಧಾರ್ಮಿಕ ಪರಿಸರವುಳ್ಳ ಪುಟ್ಟಗ್ರಾಮ. ಇದರ ಸುತ್ತಮುತ್ತ ಸುಮಾರು 8-10 ಕಿ. ಮೀ. ಫಾಸಲೆಯಲ್ಲಿ ಅನೇಕ ಶರಣರ ಗದ್ದುಗೆಗಳು, ಪುಣ್ಯಕ್ಷೇತ್ರಗಳು, ಮಠಮಾನ್ಯಗಳಿವೆ. ಆ ಗ್ರಾಮದಲ್ಲಿಯೇ ಬಂಡೇಮಠದ
ಗುರುಪರಂಪರೆಯ ಅನೇಕ ಗದ್ದುಗೆಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಕಂಚುಗಲ್ಲಪ್ಪನವರ ಗದ್ದುಗೆ ಇದೆ. ಈ ಶರಣರಿಂದಲೇ ಕಂಚುಗಲ್ ಬಂಡೇಮಠವೆಂದು ಹೆಸರು ಬರಲು ಕಾರಣವಾಯಿತೆಂದು ಹೇಳುತ್ತಾರೆ. ಸನಿಹದಲ್ಲಿಯೇ ಏಕ ಶಿಲಾ ರೂಪ ಬೃಹತ್ ಬಂಡೆಯ ಮೇಲೆ ಶ್ರೀ ಮಹಾಲಿಂಗೇಶ್ವರ ದೇವಾಲಯವಿದೆ. ಚೋಳರ ವಾಸ್ತುಶಿಲ್ಪ ರಚನೆಯ ಕಲ್ಲಿನ
ದೇವಾಲಯ ತನ್ನ ಇತಿಹಾಸವನ್ನು ಸಾರುತ್ತಿದೆ.
ಮಹಾಲಿಂಗೇಶ್ವರ ದೇವಾಲಯದ ಪೂರ್ವಭಾಗದಲ್ಲಿ ಪವಾಡದ ಬೀಸುವ ಕಲ್ಲು ಇದೆ. ಇದು ಕಂಚುಗಲ್ ಬಂಡೇಮಠದಲ್ಲಿ ದಿನನಿತ್ಯವೂ ದಾಸೋಹವಿತ್ತೆಂಬುದಕ್ಕೆ ಸಾಕ್ಷಿಯಾಗಿದೆ. ಲಿಂಗೈಕ್ಯ ಶ್ರೀ ಮ.ನೀ.ಪ್ರ.ಸ್ವ ಚನ್ನಮಲ್ಲ ಮಹಾಸ್ವಾಮಿಗಳು, ಲಿಂಗೈಕ್ಯ ಶ್ರೀ ಮ.ನೀ.ಪ್ರ.ಸ್ವ ಚರಮೂರ್ತಿ ಶ್ರೀ ತೋಂಟದ ಮಹಾಸ್ವಾಮಿಗಳು, ಲಿಂಗೈಕ್ಯ ಶ್ರೀ ಮ.ನೀ.ಪ್ರ.ಸ್ವ ಶಿವರುದ್ರ ಮಹಾಸ್ವಾಮಿಗಳವರುಗಳ ಕಾಲಾನಂತರ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಕಂಚುಗಲ್ ಬಂಡೇಮಠದಲ್ಲಿ ತ್ರಿವಿಧ ದಾಸೋಹ ಕಾರ್ಯಕ್ರಮಗಳನ್ನು ಅಭೂತಪೂರ್ವಾಗಿ ಗುರುಹಿರಿಯರ ಆಶೀರ್ವಾದದಿಂದ ಹಾಗು ಸಧ್ಭಕ್ತರ ಸಹಕಾರದಿಂದ ಮುನ್ನಡೆಸುತ್ತಿದ್ದಾರೆ.