23/01/2023
*ಓಂನಮ:ಶಿವಾಯ*
** ಓಂ ಶ್ರೀ ಮಂಟಿಗಮ್ಮ ತಾಯಿಯೇ ನಮ: **
ಶ್ರೀ ಮಂಟಿಗಮ್ಮ ತಾಯಿಯ ಮೂಲ ಕಥೆ
ಈ ಮನುಕುಲದ ಇತಿಹಾಸದಲ್ಲಿ ಇಡೀ ಸ್ತ್ರೀ ಕುಲಕ್ಕೆ ಮಾದರಿಯಾಗಿರುವಂತೆ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಸಾಮಾಜಿಕ ಚಿಂತನೆಯಲ್ಲಿ ಬದುಕಿನ ಆದರ್ಶ ಮೌಲ್ಯಗಳನ್ನು ರೂಡಿಸಿಕೊಂಡು ದಾರ್ಮಿಕ ಸಾದನೆಗೈದ ಮಹಾ ಶಿವಶರಣೀ ಶ್ರೀ ಮಂಟಿಗಮ್ಮ ತಾಯಿ, ಶ್ರೀ ಉಮಾಮಹೇಶ್ವರನನ್ನ ತನ್ನ ಆರಾದ್ಯ ದೈವವಾಗಿ ಸ್ವೀಕರಿಸಿದರು, ಹಾಗು ಸಾಕ್ಷಾತ್ಕರಿಸಿಕೊಂಡು ದಿವ್ಯ ಚೇತನರಾದರು.
ಸುಮಾರು ಐದಾರು ಶತಮಾನಗಳ ಹಿಂದೆ ಶಿವಶರಣರ ನಾಡಗಿದ್ದ ಮೈಸೂರು ರಾಜ್ಯ ಅಂದರೆ ಈಗಿನ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಕುಶಾಲನಗರದ ತಾಲೂಕಿನ ಶಿರಂಗಾಲ ಗ್ರಾಮದ, ಕಾವೇರಿ ನದಿಯ ದಡದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣ ಮಾಡಿದ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಇದಂತ ಮಹಾ ತಪಸ್ವಿಗಳು ( ಋಷಿ ಮುನಿಗಳು) ಒಮ್ಮೆ ಬಿಕ್ಷಾಟನೆಗೆಂದು ಪರ ಊರುಗಳನ್ನು ಸುತ್ತುತಿರುವ ಸಂದರ್ಭದಲ್ಲಿ, ಯಾವುದೊ ಒಂದು ಗ್ರಾಮದಲ್ಲಿ, ಬಾಲ್ಯದಲ್ಲೆ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಇಬ್ಬರು ಮಕ್ಕಳನ್ನು ನೋಡಿ, ಗುರುಗಳಿಗೆ ಅವರ ಪರಿಸ್ಥಿತಿ ನೋಡಿ ಮನಸ್ಸು ಕರಗಿ, ದೈವಾಂಶ ಸಂಬೂತರಾದಂತ ಆ ಇಬ್ಬರು ಮಕ್ಕಳನ್ನು ಶಿರಂಗಾಲ ಗ್ರಾಮದ ಗುರುಕುಲಕ್ಕೆ ಕರೆತಂದರು, ಆ ಸಹೋದರ ಸಹೋದರಿಯೆ ಶ್ರೀ ಮಂಟಿಗಮ್ಮ(ರುದ್ರಮ್ಮ) ಮತ್ತು ಆಕೆಯ ಸಹೋದರ ಶಂಕರ. ( ನಾಮ ಪದ ).
ಗುರುಕುಲದಲ್ಲಿ ಗುರುಗಳ ಆಶ್ರಯದಲ್ಲಿ ಬೆಳೆದ ಸಹೋದರ ಹಾಗು ಸಹೋದರಿ, ನಿತ್ಯ ಉಮಾಮಹೇಶ್ವರ ದೇವಸ್ಥಾನದಲ್ಲಿ ತ್ರಿಕಾಲ ಶಿವಾರಾದನೆ, ಶಿವಪೂಜ ವಿಧಿವಿಧಾನಗಳನ್ನು ಮಾಡಿಕೊಂಡು ಗುರುಕುಲದಲ್ಲಿ ನಿಷ್ಟೆಯಿಂದ ಕಾಯಕ ಮಾಡುತ್ತ, ಗುರು ಲಿಂಗ ಜಂಗಮ ಸೇವೆಯಲ್ಲಿ ನಿರತರಾಗುತ್ತಾರೆ, ದಿನ ಕಳೆದಂತೆ ರುದ್ರಮ್ಮ ಮತ್ತು ಶಂಕರ ಅವರ ಒಳ್ಳೆಯ ಗುಣ ನಡತೆಯಿಂದ, ಗ್ರಾಮಸ್ಥರೊಂದಿಗೆ ಉತ್ತಮ ಬಾಂದವ್ಯವನ್ನು ಬೆಳೆಸಿಕೊಳ್ಳುತಾರೆ.
ಡಿ ವಿ ಜಿ ರವರು ಹೇಳುವಂತೆ
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ...
ಇದೇ ಮಾತಿನ ಪ್ರಕಾರವಾಗಿ, ಗ್ರಾಮದ ದೇವಸ್ಥಾನ ಹಾಗು ಸುತ್ತಮುತ್ತಲ ಗ್ರಾಮಗಳಲ್ಲಿ ದೇವರ ಕೀರ್ತನೆಗಳು, ಶಿವಶರಣರ ವಚನ ಸಾಹಿತ್ಯವನ್ನು ಹೇಳಿಕೊಂಡು, ಅವರ ಹಿತನುಡಿಗಳ ಮೂಲದ ಗ್ರಾಮದಲ್ಲಿ ಸಾಮರಸ್ಯವನ್ನು ತಂದರು, ಗ್ರಾಮಸ್ಥರಲ್ಲಿ ಯಾವುದೇ ಜಾತಿಭೇದ ಮಾಡದೇ ಎಲ್ಲಾ ವರ್ಗದವರನ್ನು ಸಮಾನವಾಗಿ ಕಂಡವರು. ಅವರ ಮಾತಿನಿಂದ ಅದೆಷ್ಟೋ ಮನೆಗಳು ಬೆಳಕಾದವು. ಅವರ ಕಾಲ್ಗುಣದಿಂದ ಗ್ರಾಮದಲ್ಲಿ ಸುಖ, ಸಮೃಧ್ಹಿ, ಆರೊಗ್ಯ, ಅಭಿವೃದ್ದಿ ಮುಂತಾದ ಅನೇಕ ಬದಲಾವಣೆಗಳು ಕಂಡವು...
ನಮ್ಮ ನಾಡು ಶಿವಶರಣರ ಹಾಗು ಗುರು ಪರಂಪರೆಯ ನಾಡಗಿದ್ದು,
ಗುರು ಬ್ರಹ್ಮ ಗುರು ವಿಷ್ಣು ಗರು ದೇವೊ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತತ್ಮಯಶ್ರೀ ಗುರುವೇನಮ: ಎಂಬ ಶ್ಲೋಕದ ಪ್ರಕಾರ ಗುರುಗಳಲ್ಲಿ ದೇವರನ್ನು ಕಾಣುವ ನಾವುಗಳು, ಮಹಾ ಶಿವಶರಣೀಯಾಗಿದ್ದ ಅವರಲ್ಲಿ ಗ್ರಾಮಸ್ಥರು ಹಾಗು ನೆರೆ ಊರಿನ ಗ್ರಾಮಸ್ಥರು ಮುಕ್ಕೊಟಿ ದೇವತೆಗಳನ್ನು ಕಂಡರು. ಆ ಶಿವಶರಣೀಯ ಭಕ್ತಿಯನ್ನು ಕಂಡು ಹಾಗು ಅವರ ವಚನ ಸಾಹಿತ್ಯಕ್ಕೆ ಮನಸೋತು ಅಂದಿನ ರಾಜರುಗಳು ಸುಮಾರು 45 ಎಕರೆ ಕೃಷಿ ಜಮೀನನ್ನು ಬಳುವಳಿಯಾಗಿ ಕೊಟ್ಟರು... ಹಾಗು ಗ್ರಾಮಸ್ಥರು ತಾಯಿಗೆ ವಾಸವಿರಲು ಶಿರಂಗಾಲ ಗ್ರಾಮದ ಕೋಟೆಯ ಮಧ್ಯಭಾಗದಲ್ಲಿ ಒಂದು ಮನೆಯನ್ನು ನೀಡಿದರು.
ಕ್ರಮೇಣ ದಿನ ಕಳೆದಂತೆ ತಾಯಿಯು ಶಿವಭಕ್ತಿಯಲ್ಲಿ ಲೀನರಾಗಿ, ಗರುದೀಕ್ಷೆಯನ್ನು ಪಡೆದು ಸರ್ವ ಸಂಘ ಪರಿತ್ಯಾಗಿಯಾಗಿ ಗ್ರಾಮದ ಮೂಲದೇವರಾದ ಶ್ರೀ ಉಮಾಮಹೇಶ್ವರ ದೇವರ ಜಪ ಮಾಡುತ್ತ ಶಿರಂಗಾಲದಲ್ಲಿ ಹಚ್ಚಹಸಿರಿನಿಂದ ಕೂಡಿದ್ದ ಮಂಟಿ ಬನದಲ್ಲಿ ಸಮಯ ಕಳೆಯುತಿದ್ದರು. ಇದರ ನಡುವೆಯೇ ತಾಯಿಯ ಸಹೋದರನಾದ ಶಂಕರನು ಮರಣ ಹೊಂದಿದರು, ಅವರನ್ನು ದೇವರ ಜಮೀನಿನಲ್ಲಿ ಸಂಸ್ಕಾರ ಮಾಡಲಾಯಿತು, ನಂತರ ತಾಯಿ ಒಂಟಿಯಾಗಿ ಹಲವಾರು ವರ್ಷಗಳು ಕಾಲ ಕಳೆದರು, ಹೀಗೆ ವರ್ಷಗಳು ಉರುಳಿದವು...
ಬಾಲ್ಯ, ಯವ್ವನ, ವೈರಾಗ್ಯ, ಜೀವನದ ಈ ಮೂರು ಗಟ್ಟಗಳನ್ನ ದಾಟಿದ ತಾಯಿಗೆ ಮುಪ್ಪು ಅತ್ತಿರವಾಗಿ ತನ್ನ ಆತ್ಮ ಪರಶಿವನಲ್ಲಿ ಲೀನವಾಗುವ ಅರಿವಾಯಿತು, ಇದನ್ನು ಅರಿತ ಮಹಾತಾಯಿಯು ಗ್ರಾಮದ ಪ್ರಮುಖರನ್ನು ಅಂದರೆ ಊರ ಪಟೇಲರು, ಜಂಗಮ ಕುಲದ ಹಿರಿಯರು ಹಾಗು ಉಳಿದ ಪಂಗಡಗಳ ಮುಖಂಡರನ್ನು ತನ್ನ ಗೃಹಸ್ತಾನಕ್ಕೆ ಕರೆಸಿ, ನಾನು ಪರಶಿವನಲ್ಲಿಗೆ ಹೋಗುವ ಕಾಲ ಅತ್ತಿರವಾಗುತ್ತಿದೆ, ಆದರಿಂದ ನಾನು ಗ್ರಾಮದ ಪ್ರಮುಖರಲ್ಲಿ ಮನವಿ ಮಾಡುವುದೇನೆಂದರೆ,
ನಾನು ಕಾಲವಾದ ನಂತರ ನನ್ನ ಅಂತ್ಯಸಂಸ್ಕಾರವನ್ನು ನನಗೆ ಪ್ರಿಯವಾದ ಜಪ ಸ್ತಾನವಗಿರುವ ಹಚ್ಚ ಹಸಿರಿನಿಂದ ಕೂಡಿರುವ ಮಂಟಿ ಬನದಲ್ಲಿ ಗ್ರಾಮಸ್ತರೆಲ್ಲರೂ ಸೇರಿ ವೀರಶೈವ ಸಂಪ್ರದಾಯದಂತೆ ನೆರೆವೇರಿಸಬೇಕು, ಹಾಗು ಮರಣದ ನಂತರದ ವಿಧಿವಿಧಾನಗಳನ್ನು ಅಂದರೆ ವಾರ್ಷಿಕ ಆರಾಧನೆಯನ್ನು ಯಾರಿಗೂ ತೊಂದರೆಯಾಗದಂತೆ ಎರಡು ವರ್ಷಗಳಿಗೊಮ್ಮೆ ಆಚರಣೆ ಮಾಡಬೇಕು, ಹಾಗು ನನ್ನ ಆರಾಧನೆಗೆ ತಗುಲುವ ವೆಚ್ಚವನ್ನು ಯಾರಿಂದಲೂ ಪಡೆಯದೆ, ನನಗೆ ಬಲುವಳಿಯಾಗಿ ಬಂದ 45 ಎಕರೆ ಕೃಷಿ ಜಮೀನನ್ನು ಗ್ರಾಮದ ಎಲ್ಲಾ ಸಮುದಾಯದವರು ಸಮನಾಗಿ ಉಳುಮೆ ಮಾಡಿ ಅದರಿಂದ ಬಂದ ಹಣವನ್ನು ನನ್ನ ಆರಾಧನೆ ಕಾರ್ಯಕ್ಕೆ ಉಪಯೋಗಿಸಬೇಕು.
ತಂದೆ ತಾಯಿ ಇಲ್ಲದ ನನ್ನನು ಈ ಗ್ರಾಮದ ಜನರು ಮಗಳಂತೆ ನೋಡಿಕೊಂಡಿದ್ದಾರೆ ಆದರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಗ್ರಾಮದ ಮುಖಂಡರ ಒಪ್ಪಿಗೆ ಮೇರೆಗೆ ಗ್ರಾಮದ ಎಲ್ಲಾ ಸಮುದಾಯದವರು ಸೇರಿ ನನ್ನ ಆರದನೆ ಮಾಡಬೇಕು. ನನ್ನ ಕಡೆಗಾಲದಲ್ಲಿ ನನ್ನ ಯೋಗಕ್ಷೇಮ ನೋಡಿಕೊಳ್ಳುತಿರುವ ಮನೆತನದವರೆ ನನ್ನ ಅಂತಿಮ ಕಾರ್ಯಗಳನ್ನು ಮಾಡಬೇಕು ಹಾಗು ಆರಧನೆಯನ್ನು ಅದೇ ಕುಟುಂಬದವರು ಮಾಡಬೇಕು. ಆರಾಧನೆ ಮಾಡುವ ನಿಶ್ಚಯಿಸಿದ ಸಂದರ್ಭದಲ್ಲಿ ಹಲವಾರು ಪಂಗಡದ ಜನರಿಗೆ ಬೇರೆ ಬೇರೆ ರೀತಿಯ ಜವಾಬ್ದಾರಿಯನ್ನು ಒಪ್ಪಿಸಲಾಯಿತು.
* ಪಟೇಲ ಮನೆತನದವರಿಗೆ ಕಾರ್ಯಕ್ರಮದ ಖರ್ಚು ವೆಚ್ಚಗಳ ಮೇಲ್ವಿಚಾರಣೆ
* ಜಂಗಮ ಮನೆತನದವರಿಗೆ ಕಾರ್ಯಕ್ರಮದ ಪೂಜಾ ವಿಧಿ ವಿಧಾನಗಳ ಮೇಲ್ವಿಚಾರಣೆ
* ದೇವರ ಮನೆಯವರಿಗೆ ತಾಯಿಯ ಆರಾಧನೆಯ ತಯಾರಿ ಹಾಗು ಗುರು ಪೂಜಾ ವಿಧಿ.
* ಲಿಂಗಾಯತ ಸಮುದಾಯದವರು ತಾಯಿಯ ಉತ್ಸವದ ದಿನ ಕೆಂಡ ಕೊಂಡದ ವ್ಯವಸ್ಥೆ.
* ವಿಶ್ವಕರ್ಮ ಸಮುದಾಯದವರು ತಾಯಿಗೆ ಸಂಬಂದ ಪಟ್ಟ ಮರ ಸಾಮಾನುಗಳ ತಯಾರಿ ಹಾಗು ರಿಪೇರಿ ಕಾರ್ಯ.
* ಕುಂಬಾರ ಸಮುದಾಯದವರು ಉತ್ಸವದ ಸಮಯದಲ್ಲಿ ಬೇಕಾಗುವ ಮಣ್ಣಿನಿಂದ ಮಾಡಿದ ಮಡಿಕೆಗಳನ್ನು ಮಾಡಿಕೊಡುವುದು.
*ಗಾಣಿಗರು ತಾಯಿಯ ಆರಾಧನೆಗೆ ಬೇಕಾದ ಎಣ್ಣೆ ತಯಾರಿ ಮಾಡಿಕೊಡುವುದು.
* ಮಡಿವಾಳ ಸಮುದಾಯ ದವರು ತಾಯಿಗೆ ಬೇಕಾದ ನಡೆಮಡಿ ಹಾಗು ಪಂಜಿನ ಸೇವೆಯ ನಿರ್ವಹಣೆ.
* ನಯನ ಕ್ಷತ್ರಿಯ ಸಮಾಜದವರು ನಾದಸ್ವರ ಮತ್ತು ವಾಧ್ಯಗೋಷ್ಠಿ ಸೇವೆ.
* ದೇವಾಂಗ ಸಮುದಾಯದವರು ತಾಯಿಯ ಮೂಲಸ್ಥಾನ ಸ್ವಚತೆ ಹಾಗು ಸುಣ್ಣ ಬಣ್ಣದ ವ್ಯವಸ್ಥೆ.
*ಕುಂಚಿಟಿಗ ಗೌಡ ಸಮುದಾಯದವರು ಮೂಲಸ್ಥಾನಕ್ಕೆ ಚಪ್ಪರ ಹಾಗು ಹೂವಿನ ಅಲಂಕಾರ ವ್ಯವಸ್ಥೆ.
* ನಾಮದಾರಿ ಸಮುದಾಯದವರು ಆರಾಧನೆಯ ದಿನದ ಹಣ್ಣು ಕಾಯಿಯ ವ್ಯವಸ್ಥೆ.
* ಪರಿಶಿಷ್ಟ ಜಾತಿ ಸಮುದಾಯದವರು ಅಮ್ಮನವರ ದೇವಳದ ಸ್ವಚ್ಛತೆ ಕಾರ್ಯ ಹಾಗು ಗ್ರಾಮದ ಎಲ್ಲಾ ದೇವಾಲಯಗಳಿಗೆ ಚಪ್ಪರದ ವ್ಯವಸ್ಥೆ.
* ಗ್ರಾಮದವರಲ್ಲದೆ ನೆರೆ ಗ್ರಾಮಗಳಾದ ಮೂಡಲಕೊಪ್ಪಲು, ಸಾಲುಗೊಪ್ಪಲು, ನಲ್ಲೂರು, ನಲ್ಲೂರುಕೊಪ್ಪಲು, ಮಣಜೂರು ಗ್ರಾಮದ ಗ್ರಾಮಸ್ಥರು ಸ್ವಇಚ್ಛೆಯಿಂದ ಕಾರ್ಯ ಮಾಡಲು ಒಪ್ಪುತ್ತಾರೆ.
ಈ ರೀತಿಯಲ್ಲಿ ಆರಾಧನೆಯ ಸಂಪೂರ್ಣ ಜವಾಬ್ಧಾರಿಯನ್ನು ಗ್ರಾಮಸ್ತರಿಗೆ ವಿಂಗಡಿಸಿ ತಾಯಿ ಕೊನೆಯುಸಿರೆಲಳೆಯುತ್ತಾರೆ. ತಾಯಿಯವರು ಲಿಂಗೈಕ್ಯರಾದ ಬಳಿಕ ಗ್ರಾಮದಲ್ಲಿ ಹಲವಾರು ಪವಾಡಗಳು ನಡೆಯಲು ಶುರುವಾದವು, ತಾಯಿಯ ಆಶೀರ್ವಾದದಿಂದ ಅವರ ಅಗಲಿಕೆಯ ನಂತರವೂ ಗ್ರಾಮವು ಸಮೃದ್ಧವಾಗಿತ್ತು. ಇದನ್ನು ಅರಿತ ಗ್ರಾಮಸ್ತರು ಹಚ್ಚಹಸಿರ ಮಂಟಿ ಬನದಲ್ಲಿ ಲಿಂಗೈಕರಾದ ಅಮ್ಮನವರನ್ನು ಪ್ರೀತಿಯಿಂದ ಮಂಟಿಗಮ್ಮ ಎಂದು ಕರೆದು ಗ್ರಾಮದೇವತೆಯಾಗಿ ಭಕ್ತಿಯಿಂದ ಸ್ವೀಕರಿಸಿದರು.
ತಾಯಿಗೆ ಕೊಟ್ಟ ಮಾತಿನಂತೆ ಗ್ರಾಮಸ್ಥರು ಪ್ರತಿ ಎರಡು ವರ್ಷಕೊಮ್ಮೆ ಹೋಳಿ ಹುಣ್ಣಿಮೆಯ ಹಿಂದಿನ ಶುಕ್ರವಾರ ರಾತ್ರಿ ಆರಾಧನೆಯನ್ನು ಮಾಡಲು ನಿರ್ದರಿಸಿದರು, ಅಂದಿನಿಂದ ಅವರವರ ಕೆಲಸಗಳನ್ನು ಮತ್ತು ಜವಾಬ್ದಾರಿಗಳನ್ನು ಚಾಚು ತಪ್ಪದೆ ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬಂದಿದ್ದಾರೆ....
ಲೇಖನ : ಷಡಕ್ಷರ ಶಿರಂಗಾಲ✍️
( ತಾಯಿಯ ಮೂಲ ಕಥೆಯು ಜನರ ಬಾಯಿಂದ ಬಾಯಿಗೆ ಬಂದ ಕಥೆಯಾಗಿದ್ದು, ಯಾವುದೇ ರೀತಿಯ ತಪ್ಪಾಗಿದ್ದಲ್ಲಿ ಕ್ಷಮೆಯಿರಲಿ)