12/11/2016
*ಅಸ್ಪೃಶ್ಯತೆ ಉಳಿವಿಗೆ ಶೋಷಿತ ಸಮುದಾಯಗಳ ಉದ್ಯೋಗವೂ ಕಾರಣ?*
ಎರಡು ಕೈ ಸೇರಿದರೆ ಚಪ್ಪಾಳೆ. ಹಾಗೆಯೇ ಎರಡೂ ಸಮುದಾಯಗಳು ಸೇರಿದರೆ ಅಸ್ಪೃಶ್ಯತಾಚರಣೆ! ಹೌದು, ಅಸ್ಪೃಶ್ಯತಾಚರಣೆ ಅದು ಒಂದು ಮಗ್ಗುಲ ಸಮಸ್ಯೆ ಯಲ್ಲ. ಎರಡೂ ಆಯಾಮದಲ್ಲೂ ಅದು ಉಂಟಾಗಿದೆ. ಒಂದು ಆಯಾಮ ಸವರ್ಣೀಯರಾದರೆ ಮತ್ತೊಂದು ಆಯಾಮ ಸ್ವತಃ ಅಸ್ಪೃಶ್ಯ ಸಮುದಾಯಗಳೇ ಆಗಿವೆ. ಉದಾಹರಣೆಗೆ ಮೇಲಾಧಿಕರಿಯೊಬ್ಬ ತನ್ನ ಕೆಳ ಹಂತದ ನೌಕರರನ್ನು ಸಹಜವಾಗಿ ಕೀಳಾಗಿ ಕಾಣುತ್ತಾನೆ. ಆತ ಕಸ ಗುಡಿಸುತ್ತಿದ್ದರೆ ಮೇಲಾಧಿಕಾರಿ ತನ್ನ ಸಹಜ ದರ್ಪ ತೋರುತ್ತಾನೆ. ಅಸ್ಪೃಶ್ಯತೆಯೂ ಹಾಗೆಯೇ. ಒಂದು ಸಮುದಾಯ ಸದಾ ಕೀಳು ಕೆಲಸಗಳನ್ನು ಮಾಡುತ್ತಿದ್ದರೆ ಈಗಾಗಲೇ ಅದಕ್ಕಿಂತ ಉನ್ನತ ಎಂದು ಗುರುತಿಸಿಕೊಂಡಿರುವ ಸಮುದಾಯ ಆ ಸಮುದಾಯವನ್ನು ಮೇಲಾಗಿ ಕಾಣಲು ಸಾಧ್ಯವೆ? ಇಲ್ಲ. ಸಮಾಜದಲ್ಲಿ ಕೀಳು ಕೆಲಸಗಳೂ ಇವೆ ಮೇಲು ಕೆಲಸಗಳೂ ಇವೆ. ಅಮೆರಿಕಾದಲ್ಲಾದರೋ ಚರ್ಮದ ಬಣ್ಣದ ಆಧಾರದ ಮೇಲೆ ಮೇಲು-ಕೀಳು ಎನ್ನಲಾಯಿತು. ಆದರೆ ಭಾರತದಲ್ಲಿ ವ್ಯಕ್ತಿ ಅಥವಾ ಆತನ ಸಮುದಾಯ ಮಾಡುವ ಕೆಲಸದ ಮೇಲೆ ಮೇಲು ಕೀಳು ಎನ್ನಲಾಯಿತು. ಅಂಬೇಡ್ಕರ್ ಮನುಸ್ಮೃತಿ ಸುಟ್ಟದ್ದು ಈ ಮೂಲ ಕಾರಣಕ್ಕೆ ಉದ್ಯೋಗದಲ್ಲಿ , ಉದ್ಯೋಗ ಮಾಡುವವರ ಆಧಾರದಲ್ಲಿ ಮೇಲು-ಕೀಳು ಎಂದ ಅದರ ತಾತ್ವಿಕತೆಯ ಕಾರಣಕ್ಕೆ.
ಇರಬಹುದು, ಮನು ನಾಲ್ಕೈದು ಅಂದರೆ ಪೂಜೆ ಮಾಡುವುದು, ವ್ಯಾಪಾರ ಮಾಡುವುದು, ಯುದ್ಧ ಮಾಡುವುದು, ಸೇವೆ ಮಾಡುವುದು ಹೀಗೆ ಕೆಲಸಗಳಿಗೆ ಜಾತಿಗಳನ್ನು ಸೃಷ್ಟಿಸಿದ. ಆದರೆ ಸ್ಪರ್ಧಾ ಪ್ರಪಂಚದಲ್ಲಿ ಅಂತಹ ಕೆಲಸದ ಆಧಾರದ ತಾರತಮ್ಯ ಎಲ್ಲ ಕೆಲಸಗಳಿಗೂ ವಿಸ್ತರಿಸಿತು. ಯಾವ ಮಟ್ಟಕ್ಕೆ ಅಂದರೆ ಒಂದೊಂದು ಕೆಲಸಕ್ಕೂ ಒಂದೊಂದು ಜಾತಿ ಅನ್ನುವಂತೆ! ಒಟ್ಟಾರೆ ವಿವಿಧ ಕೆಲಸಗಳಿಂದ ವಿವಿಧ ಜಾತಿ ಸೃಷ್ಟಿಯಾಯಿತು ಹಾಗೆಯೇ ಅದರ vice versa ಅಂದರೆ ವಿವಿಧ ಜಾತಿಗಳಿಂದ ವಿವಿಧ ಕೆಲಸಗಳೂ ಸೃಷ್ಟಿಯಾಯಿತು. ಕೆಲಸ ಜಾತಿ, ಜಾತಿ ಕೆಲಸ ಹೀಗೆ ಮಾಡುವ ಕೆಲಸದ ಆಧಾರದ ಮೇಲೆ ಜಾತಿ ಗಟ್ಟಿಯಾಗುತ್ತಾ ಹೋಯಿತು. ಆಶ್ಚರ್ಯವೆಂದರೆ ಹಾಗೆ ಕಾಲಾಂತರ ಸೃಷ್ಟಿ ಯಾದ ಹೊಸ ಕೆಲಸಗಳೂ ನಿರ್ದಿಷ್ಟ ಜಾತಿಗೆ ಎನ್ನುವಂತೆ ಮಾಡಲಾಯಿತೆಂದರೆ...! ಉದಾಹರಣೆಗೆ ಹಿಂದೆ ಬಹಿರ್ದೆಶೆಗೆ ಮನುಷ್ಯ ಹೊಲಗಳಿಗೆ, ಬಯಲು ಪ್ರದೇಶಗಳಿಗೆ ಹೋಗುತ್ತಿದ್ದ. ಆಗ ಶೌಚಾಲಯ ಶುಚಿಗೊಳಿಸುವ ಕೆಲಸ ದಲಿತರಿಗೆ ಎಂಬಂತೆ ಇರಲಿಲ್ಲ. ಆದರೆ ಶೌಚಾಲಯ ವ್ಯವಸ್ಥೆ ಬಂದಂತೆ ಅದನ್ನು ಶುಚಿಗೊಳಿಸುವ ಕೆಲಸವನ್ನು ದಲಿತರಿಗೆ ವಹಿಸಲಾಯಿತು ಅಥವಾ ಅವರ ತಲೆಗೆ ಕಟ್ಟಲಾಯಿತು. ಅಂದರೆ ಶೌಚಾಲಯ ಶುಚಿಗೊಳಿಸುವ ಉದ್ಯೋಗ ಇದು ಲೇಟೆಸ್ಟ್ ಎಂಬುದು ಅರಿವಾಗುತ್ತದೆ. ಹಾಗೆಯೇ ಚಮ್ಮಾರಿಕೆ ಕೂಡ ಅದಕ್ಕಿಂತಲೂ ಸ್ವಲ್ಪ ಹಿಂದಿನದ್ದೆಂದು ಅದರ ಇತಿಹಾಸ ಅಧ್ಯಯನ ಮಾಡಿದರೆ ತಿಳಿಯುತ್ತದೆ.
ಈ ನಿಟ್ಟಿನಲ್ಲಿ ಇಲ್ಲಿ ದಲಿತರ ಮೇಲೆ ಕೆಲವು ಉದ್ಯೋಗಗಳನ್ನು ಹೇಳಲಾಗಿದೆ ಎಂಬುದು ಅರಿವಾಗುತ್ತದೆ. ಹಾಗೆಯೇ ಆ ಉದ್ಯೋಗ ಗಳು ಕೀಳು, ಗಲೀಜು ಆಗಿದ್ದರಿಂದ ಅಸ್ಪೃಶ್ಯತೆ ಯ ಡಿಗ್ರಿ ಕೂಡ ಏರುತ್ತ ಬಂದಿದೆ. ಹೀಗಿರುವಾಗ ಅಸ್ಪೃಶ್ಯತೆ ಯ ಈ ಡಿಗ್ರಿ ಇಳಿಸುವುದು? ಇಳಿಸಿದರೆ ಅಸ್ಪೃಶ್ಯತೆ ಇಳಿಯುತ್ತದೆ ಎಂಬುದಂತು ಸತ್ಯ. ಅಂದಹಾಗೆ ಮತ್ತೆ ಕೇಳುವುದೆಂದರೆ ಆ ಡಿಗ್ರಿ ಇಳಿಸುವವರು? ಸವರ್ಣೀಯರತ್ತ ಒಂದು ಬೆರಳು ತೋರಿಸಬಹುದು ಆದರೆ ಇನ್ನುಳಿದ ನಾಲ್ಕು ಬೆರಳುಗಳು ಅಸ್ಪೃಶ್ಯ ಸಮುದಾಯಗಳತ್ತಲೇ ತೋರಿಸುತ್ತವೆ! ಹೌದು, ಹೊರೆಯನ್ನು ಹೇರುವವರು ಇರಬಹುದು ಆದರೆ ಬೇಡ ಇಂದು ನಿರಾಕರಿಸುವ ಹೊರೆಯಿಂದ ತಪ್ಪಿಸಿಕೊಳ್ಳುವ ಅವಕಾಶ ಸಂಬಂಧಿತ ಸಮುದಾಯಗಳಿಗೆ ಇತ್ತು. ಈಗಲೂ ಇದೆ. ಈ ಕಾರಣಕ್ಕೆ ಯಾವ ಉದ್ಯೋಗಗಳನ್ನು ಕೀಳು ಎಂದು ಸಮಾಜ ದೂರವಿಟ್ಟಿದೆಯೋ ಗುರುತಿಸಿದೆಯೋ ಅಂತಹ ಉದ್ಯೋಗಗಳಿಂದ ಅಸ್ಪೃಶ್ಯ ಸಮುದಾಯ ದೂರ ಉಳಿಯುವ ಅಗತ್ಯವಿದೆ. ಬದಲಿಗೆ ಉದ್ಯೋಗ ಬದಲಿಸುವ ಅಗತ್ಯ ವಿದೆ. ಅಂದಹಾಗೆ ಹೀಗೆ ಬದಲಿಸಬಾರದು ಎಂಬ ಆಸೆ ಶೋಷಿತ ಸಮುದಾಯದ ಜನರಲ್ಲಿ ಇದೆ ಎಂದೇ? ಖಂಡಿತ ಇಲ್ಲ.
ಈ ಸಂಬಂಧ ಕುದ್ದು ಪಾಲ್ಗೊಂಡ ವಯಕ್ತಿಕ ಘಟನೆ ಯೊಂದನ್ನು ದಾಖಲಿಸುವುದಾದರೆ ಕೆಲದಿನಗಳ ಹಿಂದೆ ಒಂದು ಬೆಳಿಗ್ಗೆ ಡ್ಯೂಟಿಗೆ ಹೊರಡುವಾಗ ಇದ್ದ ನಾಲ್ಕು ನಿಮಿಷಗಳ ಅವಧಿಯಲ್ಲಿ ರಸ್ತೆ ಯಲ್ಲಿ ಕಸ ತುಂಬುತ್ತಿದ್ದ ತಳ್ಳುವ ಗಾಡಿಯ ಬಾಯಲ್ಲಿ ವಿಷಲ್ ಇಟ್ಟು ಕೊಂಡಿದ್ದ ನನ್ನ ಸಹೋದರಿ ಪೌರಕಾರ್ಮಿಕರೊಬ್ಬರನ್ನು ಮಾತನಾಡಿಸಿದೆ. "ಅಮ್ಮ ,ಯಾಕೆ ನೀವೇ ಈ ಕೆಲಸ ಮಾಡಬೇಕು? ಇಂಥ ಗಲೀಜನ್ನು ನೀವೊಬ್ಬರೆ ಯಾಕೆ ತುಂಬಬೇಕು? ನಾನೂ ನಿಮ್ಮ ವನೇ. ಬೇರೆ ಜಾತಿಯವರು ಮಾಡಲಿ ಬಿಡಿ. ದಯವಿಟ್ಟು ಈ ಕೆಲಸ ಬಿಟ್ಟು ಬಿಡಿ" ಎಂದೆ. ಅದಕ್ಕೆ ಅವರು" ಏನ್ ಮಾಡೋದು ಸ್ವಾಮಿ, ನಮಗೆ ಬರೋದು ಇದೊಂದೇ ಕೆಲಸ ಅಂಥ ಎಲ್ಲಾ ಹೇಳ್ತವರೆ. ಎಲ್ಲರೂ ನಾವು ಇದನ್ನೆ ಮಾಡಬೇಕು ಅಂತ ಎಲ್ಲರೂ ಅಂತಾರೆ" ಅಂದರು. ನಾನು "ಯಾರು ಹಾಗೆ ಅನ್ನೋರು? ಮೊದಲು ಈ ಕೆಲಸ ಬಿಡಿ. ಬೇರೆ ಉದ್ಯೋಗ ಮಾಡಿ. ಮನೆ ಕೆಲಸ ಮಾಡಿ. ಕೂಲಿ ಕೆಲಸ ಮಾಡಿ.ಈ ಗಲೀಜು ಕೆಲಸ ಮಾಡಬೇಡಿ. ನಿಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಈ ಕೆಲಸಕ್ಕೆ ಹಚ್ಚಬೇಡಿ" ಅಂದೆ. ಅದಕ್ಕೆ ಅವರು "ಇಲ್ಲ, ಸ್ವಾಮಿ , ನಮ್ಮ ಮಕ್ಕಳನ್ನು ಓದಿಸುತ್ತಿದ್ದೇವೆ. ಈ ಕೆಲಸಕ್ಕೆ ಹಾಕುವುದಿಲ್ಲ" ಎಂದರು. ಈ ಸಂದರ್ಭದಲ್ಲಿ ನನಗೆ ಅರಿವಾದದ್ದೆಂದರೆ ನಾವು ಸಂಬಂಧಿತ ಪೌರಕಾರ್ಮಿಕರಿಗೆ ಜಾಗೃತಿ ಮೂಡಿಸುವಲ್ಲಿ ವಿಫಲರಾಗಿದ್ದೇವೆ ಎಂದು. ಯಾಕೆಂದರೆ ಅವರಿಗೆ ಇನ್ನೊಬ್ಬರು ಅಥವಾ ಸಮಾಜ ಹೇಳುವುದರಿಂದ ಹಾಗೆ ಅಂದುಕೊಳ್ಳುವುದರಿಂದ ನಾವು ಇದೇ ಕೆಲಸ ಮಾಡಬೇಕೆಂಬ ನಂಬಿಕೆ ಇದೆ ಮತ್ತು ಅವರನ್ನು ಅದು ಆ ಉದ್ಯೋಗಕ್ಕೆ ಕಟ್ಟಿಹಾಕಿದೆ. ಬದಲಿಗೆ ಅವರಿಗೆ ಅದು ಸುಳ್ಳು, ಯಾರೂ ಇಂತಹದ್ದೆ ಉದ್ಯೋಗ ಮಾಡಬೇಕು ಎಂಬ ರೂಲ್ಸ್ ಇಲ್ಲ ಎಂದು ಅರಿವು ಮೂಡಿಸಿದರೆ? ಖಂಡಿತ ಮುಂದಿನ ತಲೆಮಾರಿಗಾದರೂ ಇಂತಹ ಹೀನ ಕೆಲಸ ಆಧಾರಿತ ಉದ್ಯೋಗ ಆಧಾರಿತ ಜಾತಿ ವ್ಯವಸ್ಥೆ ತೊಲಗುತ್ತದೆ. ಈ ನಿಟ್ಟಿನಲ್ಲಿ ಒಮ್ಮೆ ಹೀಗೆ ಇಂತಹ ಜಾತಿಗೆ ಇಂತಹ ಉದ್ಯೋಗ ಇಂತಹ ಉದ್ಯೋಗಕ್ಕೆ ಇಂತಹ ಜಾತಿ ಎಂಬುದು ತೊಲಗಿದರೆ ಅಸ್ಪೃಶ್ಯತೆ ಅದು ಆಚರಿಸುವ ಸಂದರ್ಭಗಳೇ ಕಡಿಮೆಯಾಗುತ್ತದೆ. ವಿಶೇಷವಾಗಿ ಅದರ ಭೀಕರತೆ.
ಯಾಕೆಂದರೆ ಸತ್ತ ದನದ ಚರ್ಮ ತೆಗೆಯುವವರ ಮೇಲಿನ ದೌರ್ಜನ್ಯ, 'ಹೇ! ಟಾಯ್ಲೆಟ್ ಸರಿಯಾಗಿ ತೊಳೆ' ಎಂಬ ದೌರ್ಜನ್ಯ, ಚಪ್ಪಲಿ ಹೊಲಿಯುವವನ ಮುಂದೆ ಚಪ್ಪಲಿ ಬೀಸಾಡುವ ದೌರ್ಜನ್ಯ, ಕಾಸು ಕೊಡಲು ಸತಾಯಿಸುವ ದೌರ್ಜನ್ಯ ಅದು ಸರ್ಕಾರಿ ಉದ್ಯೋಗಗಳಲ್ಲಿರುವ ದಲಿತರ ಮೇಲೆ ನಡೆಯುವ ದೌರ್ಜನ್ಯದ ನೂರು ಪಟ್ಟು ಇರುತ್ತದೆ. ಅಪಮಾನದ ಪರಿಮಾಣವೂ ಅಷ್ಟೇ. ದೌರ್ಜನ್ಯ ತಡೆ ಕಾಯಿದೆ ಇರಬಹುದು. ಆದರೆ ಹೀಗೆ ಕೀಳು ಉದ್ಯೋಗಗಳಿಂದ ತಪ್ಪಿಸಿಕೊಂಡು ದೌರ್ಜನ್ಯದ ಸಂದರ್ಭಗಳಿಂದ ತಪ್ಪಿಸಿಕೊಳ್ಳದಿದ್ದರೆ ಖಂಡಿತ ಕಾಯಿದೆ ಕಾನೂನು ಗಳು ಕೂಡ ಏನೇನು ಮಾಡಲಾರವು. ಯಾಕೆಂದರೆ ರೋಗಾಣುಗಳಿರುವ ವಾತಾವರಣದಲ್ಲಿ ಬದುಕುತ್ತ ರೋಗ ಬರಿಸಿಕೊಂಡು ಪದೇ ಪದೇ ಡಾಕ್ಟರ್ ಬಳಿ ಹೋದರೆ ಏನು ಪ್ರಯೋಜನ? ಬದಲಿಗೆ ರೋಗದ ವಾತಾವರಣದಿಂದ ದೂರ ಉಳಿದರೆ? ಖಾಯಿಲೆಯೂ ನಿಧಾನಕ್ಕೆ ವಾಸಿಯಾಗಿತ್ತದೆ ಅದು ಪದೇ ಪದೇ ತಗುಲುವ ಸಾಧ್ಯತೆ ಕೂಡ ಕಮ್ಮಿಯಾಗುತ್ತದೆ. ಈ ನಿಟ್ಟಿನಲ್ಲಿ ಅಸ್ಪೃಶ್ಯತೆ ಎಂಬ ರೋಗ ಕಮ್ಮಿಯಾಗಲಿ, ಕೀಳು ಉದ್ಯೋಗಗಳಿಂದ ಶೋಷಿತ ಸಮುದಾಯಗಳು ದೂರ ಉಳಿದು ಅಂತಹ ಸಾಮಾಜಿಕ ರೋಗ ಪದೇ ಪದೇ ತಗಲುವುದರಿಂದ ತಪ್ಪಿಸಿಕೊಳ್ಳಲಿ, ಅಸ್ಪೃಶ್ಯತೆ ನಿರ್ಮೂಲನೆಯಲ್ಲಿ ತನ್ನ ಬಹುಮುಖ್ಯ ಜವಾಬ್ದಾರಿಯನ್ನು ಅರಿಯಲಿ