18/11/2019
ಈ ಭೂಮಿ ಬಣ್ಣದ ಬುಗುರಿ, ಜೋರಾಗ್ತಿರ‍್ಗಿದ್ರೆ ಹೇಗಿರ‍್ತದಂತೀರಿ?
[ತಿಳಿರುತೋರಣ * * ಶ್ರೀವತ್ಸ ಜೋಶಿ]
ಅದನ್ನೊಂದು ‘ರೆ’ ಪ್ರಪಂಚ ಅಂತಂದುಕೊಳ್ಳೋಣ. ‘ಆದ್ರೆ ಹೋದ್ರೆ ಅಜ್ಜಿಗ್ ಮೀಸೆ ಬಂದ್ರೆ ಎತ್ತು ಕರು ಹಾಕಿದ್ರೆ ಕೋಣ ಹಾಲು ಕೊಟ್ಟ್ರೆ...’ ಎಂದು ಚಿಕ್ಕಂದಿನಲ್ಲಿ ಹೇಳ್ತಿದ್ದೆವಲ್ಲ? ಈಗ ಬೇಕಿದ್ದರೆ ‘ರಾಹುಲ್ ಗಾಂಧಿಗೆ ಮದ್ವೆ ಆದ್ರೆ’ ಅಂತನೂ ಸೇರಿಸಿಕೊಳ್ಳಬಹುದು. ಅದೆಲ್ಲ ಆಗೋದಿಲ್ಲವೆಂದು ಗೊತ್ತು, ಆದರೂ ಅಕಸ್ಮಾತ್ ಹಾಗೆ ಆದರೆ? ಅಂಥದೇ ಒಂದು ಆಲೋಚನೆಯಿದು- ನಮ್ಮ ಭೂಮಿ ಸಡನ್ನಾಗಿ ಮೂಡ್ ಚೇಂಜ್ ಮಾಡ್ಕೊಂಡು ಈಗಿನದಕ್ಕಿಂತ ಹೆಚ್ಚು ಸ್ಪೀಡಾಗಿ ತಿರುಗತೊಡಗಿದರೆ!? ಹೆಚ್ಚು ಅಂದರೆ ಹೆಚ್ಚೇನಲ್ಲ, ಈಗಿನದಕ್ಕಿಂತ ಗಂಟೆಗೆ ಒಂದು ಮೈಲಿಯಷ್ಟೇ ಹೆಚ್ಚು ಅಂತಿಟ್ಕೊಳ್ಳೋಣ. ಏನಾಗಬಹುದು? ಯೋಚಿಸುವ ಮುನ್ನ ಈ ಪ್ರಾಥಮಿಕ ಮಾಹಿತಿಯನ್ನೊಮ್ಮೆ ಮನನ ಮಾಡಿಕೊಳ್ಳಿ: ಭೂಮಿಗೆ ಎರಡು ರೀತಿಯ ಚಲನೆಗಳಿವೆ. ಒಂದನೆಯದು ಸೂರ್ಯನ ಸುತ್ತ ಪ್ರದಕ್ಷಿಣೆ. ಇದಕ್ಕೆ ಭೂಮಿ 365 ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಇದನ್ನೇ ನಾವು ಒಂದು ವರ್ಷ ಎನ್ನುತ್ತೇವೆ. ಎರಡನೆಯದು, ಭೂಮಿ ತನ್ನ ಅಕ್ಷದಲ್ಲಿ ತನ್ನ ಸುತ್ತಲೇ ತಿರುಗುವುದು. ಇದಕ್ಕೆ ಭೂಮಿ 24 ಗಂಟೆಗಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದನ್ನೇ ನಾವು ಒಂದು ದಿನ ಎನ್ನುತ್ತೇವೆ. ಈ ಎರಡು ವಿಧದ ಚಲನೆಗಳು ಹೇಗೆಂದರೆ- ದೇವಸ್ಥಾನಗಳಲ್ಲಿ ಉರುಳುಸೇವೆ ಸಲ್ಲಿಸುವವರು ತಮ್ಮ ಅಕ್ಷದ ಸುತ್ತಲೂ ಸುತ್ತುತ್ತ, ಹಾಗೆಯೇ ಉರುಳುತ್ತ ಸಾಗಿ ಗರ್ಭಗುಡಿಗೂ ಸುತ್ತು ಬರುತ್ತಾರಲ್ಲ, ಆ ರೀತಿ. ಆ ದೃಷ್ಟಿಯಲ್ಲಿ ನೋಡಿದರೆ ಭೂಮಿಯದು ಸೂರ್ಯನ ಸುತ್ತ ಉರುಳುಸೇವೆಯೇ. ಇರಲಿ, ಭೂಮಿಯು ಈ ಎರಡೂ ಚಲನೆಗಳ ವೇಗವನ್ನು ಹೆಚ್ಚಿಸಿಕೊಂಡರೆ ಏನಾಗಬಹುದು? ಎಂಬುದು ಸದ್ಯದ ಹುಚ್ಚು ಆಲೋಚನೆ.
ಇದು ನಿಜಕ್ಕೂ ಹುಚ್ಚಲ್ವಾ? ಅಮೆರಿಕದಲ್ಲಿ ಟ್ರಂಪಣ್ಣನ ಇಂಪೀಚ್‌ಮೆಂಟು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಮುಖದ ಗಂಟು, ನೌಕರರಿಗೆ ಸಂಬಳದಲ್ಲಿ ಹೆಚ್ಚಳ ಬರೀ ವನ್ ಪರ್ಸೆಂಟು, ಮೋದಿದ್ವೇಷಿಗಳಾಗ್ತಿದ್ದಾರೆ ಇನ್ನೂ ಇನ್ನೂ ಇರ್ರೆಲವೆಂಟು... ಹೀಗೆ ಒಬ್ಬೊಬ್ಬರಿಗೂ ಎದುರಿಸಬೇಕಾದ ಸಮಸ್ಯೆಗಳೇ ಬೆಟ್ಟದಷ್ಟುಂಟು. ಅವು ಸಾಕಾಗದಿದ್ದರೆ- ಎಲ್‌ಕೆಜಿಗೆ ಮಗುವನ್ನು ಸೇರಿಸಲು ಎಷ್ಟು ಲಕ್ಷ ಕೂಡಿಡಬೇಕಾಗಿದೆ ಎಂದು ಬೆಂಗಳೂರಿನ ಗೃಹಿಣಿಯೊಬ್ಬಳಿಗೆ ಚಿಂತೆ. ಗ್ಲೋಬಲ್ ವಾರ್ಮಿಂಗ್ ಹೆಚ್ಚಿದೆಯೆಂದು ಗ್ರೇಟಾ ಥನ್‌ಬರ್ಗ್ ಆದಿಯಾಗಿ ಎಲ್ಲರೂ ತುತ್ತೂರಿಯೂದುತ್ತಿದ್ದರೂ ಈ ಬಾರಿಯ ಭೀಕರ ಚಳಿ ಮತ್ತು ಹಿಮಪಾತಗಳನ್ನು ತಡೆದುಕೊಳ್ಳೋದು ಹೇಗಪ್ಪಾ ಎಂದು ಅಮೆರಿಕನ್ನಡಿತಿಯೊಬ್ಬಳಿಗೆ ನಿಟ್ಟುಸಿರು. ಯಾರಿಗೆ ಬೇಕಾಗಿದೆ ‘ಭೂಮಿಯ ಸ್ಪೀಡ್ ಹೆಚ್ಚಾದ್ರೆ ಏನಾದೀತು’ ಎಂಬ ಇಲ್ಲದ ಸಮಸ್ಯೆ? ಹಾಗೆ ಆಗೋದೂ ಇಲ್ಲ, ಒಂದೊಮ್ಮೆ ಆದರೂ ಆಗ ನಾವ್ಯಾರೂ ಉಳಿಯೋದೂ ಇಲ್ಲ. ಮತ್ತ್ಯಾಕೆ ಮಂಡೆಬೆಚ್ಚ?
ಹಾಗಲ್ಲ. ಈ ರೀತಿಯ ಹುಚ್ಚು ಚಿಂತನೆಗಳೂ ನಮ್ಮ ಅರಿವನ್ನು ವಿಸ್ತರಿಸಬಲ್ಲವು. ಆಲೋಚನಾಶಕ್ತಿಯನ್ನು ಹರಿತಗೊಳಿಸಬಲ್ಲವು. ಸಾಮಾನ್ಯ ಜ್ಞಾನ ಹೆಚ್ಚಿಸಬಲ್ಲವು. ಉದಾಹರಣೆಗೆ- ಭೂಮಿಯು ತನ್ನ ಅಕ್ಷದಲ್ಲಿ ತನ್ನ ಸುತ್ತಲೇ ತಿರುಗುತ್ತಿರುವ ವೇಗ, ಈಗ ಎಷ್ಟಿದೆ? ಇದರ ಉತ್ತರವು ನೀವು ಭೂಮಿಯ ಮೇಲೆ ಎಲ್ಲಿದ್ದೀರೆಂಬುದನ್ನು ಅವಲಂಬಿಸಿದೆ. ಭೂಮಧ್ಯ ರೇಖೆಯ ಮೇಲಿರುವ ಜಾಗದಲ್ಲಾದರೆ ಗಂಟೆಗೆ ಸುಮಾರು 1037 ಮೈಲು ವೇಗ. ಧ್ರುವ ಪ್ರದೇಶದತ್ತ ಹೋದಂತೆಲ್ಲ ಇದು ಕಡಿಮೆಯಾಗುತ್ತದೆ. ಸುಲಭವಾಗಿ ಅರ್ಥವಾಗಬೇಕಾದರೆ- ಭೂಮಧ್ಯರೇಖೆಗೆ ಹತ್ತಿರದಲ್ಲಿರುವ ಶ್ರೀಲಂಕಾದಲ್ಲಿ ತುಂಬ ಫಾಸ್ಟು. ಉತ್ತರ ಧ್ರುವಕ್ಕೆ ಹತ್ತಿರದಲ್ಲಿರುವ ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಸ್ಲೋ. ಆ ಕಡೆ ದಕ್ಷಿಣ ಧ್ರುವಕ್ಕೆ ಹತ್ತಿರದಲ್ಲಿರುವ ಸಿಡ್ನಿಯಲ್ಲೂ ಸ್ಲೋ. ಇಲ್ಲಿ ಇನ್ನೊಂದು ವಿಚಾರ ಗಮನಿಸಬೇಕಾದ್ದು ಇದೆ- ಭೂಮಧ್ಯರೇಖೆಗೆ ಹತ್ತಿರದ ಪ್ರದೇಶಗಳಲ್ಲಿ ಹಗಲು-ರಾತ್ರಿ ಹೆಚ್ಚೂಕಡಿಮೆ ಸಮಪ್ರಮಾಣದಲ್ಲಿ ಇರುವುದು, ದೂರದ ಪ್ರದೇಶಗಳಲ್ಲಿ ಹಗಲು-ರಾತ್ರಿ ಅನುಪಾತ ಏರುಪೇರಾಗುವುದು ಇದೇ ಕಾರಣದಿಂದ.
ಸರಿ, ಈಗ ಸ್ಪೀಡ್ ಹೆಚ್ಚಿಸುವ ವಿಷಯಕ್ಕೆ ಬರೋಣ. ಭೂಮಿಯು ತನ್ನ ತಿರುಗುವಿಕೆಯ ವೇಗವನ್ನು ಗಂಟೆಗೆ ಒಂದು ಮೈಲಿಯಷ್ಟು ಹೆಚ್ಚಿಸಿಕೊಂಡರೂ ಭೂಮಧ್ಯರೇಖೆಯ ಆಸುಪಾಸಿನ ಸಮುದ್ರಗಳಲ್ಲಿ ನೀರಿನ ಮಟ್ಟ ಕೆಲವು ಇಂಚುಗಳಷ್ಟು ಹೆಚ್ಚುತ್ತದೆ. ಧ್ರುವ ಪ್ರದೇಶಗಳಿಂದ ನೀರು ಆ ಕಡೆಗೆ ನುಗ್ಗುವುದೇ ಇದಕ್ಕೆ ಕಾರಣ. ಇದು ನಮಗೆ ಗೊತ್ತಾಗಲಿಕ್ಕೆ ಕೆಲವು ವರ್ಷಗಳೇ ಬೇಕಾಗಬಹುದು. ಅದಕ್ಕಿಂತ, ತತ್‌ಕ್ಷಣ ನಮ್ಮ ಗಮನಕ್ಕೆ ಬರಬಹುದಾದ್ದೆಂದರೆ ನಾವು ಅಂತರಿಕ್ಷದಲ್ಲಿ ಸ್ಥಾಪಿಸಿರುವ ಕೃತಕ ಉಪಗ್ರಹಗಳು ಗಲಿಬಿಲಿಗೊಳ್ಳುವವು. ಅವುಗಳನ್ನು ಭೂಮಿಗೆ ನಿರ್ದಿಷ್ಟ ದೂರದಲ್ಲಿ, ಭೂಮಿಯಷ್ಟೇ ವೇಗದಲ್ಲಿ ಸುತ್ತುವಂತೆ ಇರಿಸಿರುತ್ತೇವಲ್ವಾ? ಭೂಮಿಯ ಮೇಲಿನ ನಿರ್ದಿಷ್ಟ ಪ್ರದೇಶವೊಂದನ್ನೇ ಸದಾ ‘ನೋಡುತ್ತ’ ಇರುವುದು ಉಪಗ್ರಹಕ್ಕೆ ಸಾಧ್ಯವಾಗುವುದು ಇದರಿಂದಲೇ. ಹಾಗಿರುವಾಗ ಭೂಮಿ ಅಚಾನಕ್ಕಾಗಿ ಸ್ಪೀಡ್ ಹೆಚ್ಚಿಸಿದರೆ ಎಲ್ಲ ಅಯೋಮಯ! ಉಪಗ್ರಹದಿಂದಾಗಿ ಸಾಧ್ಯವಾಗುವ ದೂರಸಂಪರ್ಕ, ಟೆಲಿವಿಷನ್ ಪ್ರಸಾರ, ಮಿಲಿಟರಿ ಬೇಹುಗಾರಿಕೆ ಎಲ್ಲದಕ್ಕೂ ಅಡಚಣೆ. ಕೆಲವು ಸ್ಮಾರ್ಟ್ ಉಪಗ್ರಹಗಳಲ್ಲಿ ಇಂಧನವೂ ಇರುವುದರಿಂದ ಅವು ತಮ್ಮ ವೇಗವನ್ನೂ ಹೆಚ್ಚಿಸಿಕೊಂಡು ಸರಿದೂಗಿಸಬಲ್ಲವು. ಆದರೆ ಹೆಚ್ಚಿನವುಗಳಿಗೆ ಆ ಸಾಮರ್ಥ್ಯವಿಲ್ಲ. ಅವು ನಿಷ್ಪ್ರಯೋಜಕವೆನಿಸಿ ಹೊಸದಾಗಿ ಉಪಗ್ರಹಗಳನ್ನು ನಿರ್ಮಿಸಬೇಕಾಗುವುದು. ನಿಜ, ಇದೇನೂ ಪ್ರಳಯವಾಗಿ ಪ್ರಪಂಚವೇ ಮುಳುಗಿದಂತೆ ಅಲ್ಲ. ಆದರೆ, ಒಂದೆರಡು ಗಂಟೆ ಕಾಲ ಫೇಸ್‌ಬುಕ್ ವಾಟ್ಸಪ್ಪುಗಳಿಂದ ದೂರವಿದ್ದರೆ, ಇ-ಬಂಧುಮಿತ್ರರ ದರ್ಶನವಾಗದಿದ್ದರೆ, ಚಡಪಡಿಸಿ ಅಲ್ಲೋಲಕಲ್ಲೋಲ ಎನಿಸುವವರಿಗೆ ಇದೂ ಒಂದು ಪ್ರಳಯವೇ.
ಭೂಮಿ ತಿರುಗುವಿಕೆಯ ವೇಗ ಗಂಟೆಗೆ ಒಂದು ಮೈಲು ಹೆಚ್ಚಾದರೇನೇ ಇಷ್ಟು ರಾದ್ಧಾಂತ. ವೇಗ ಇನ್ನಷ್ಟು ಹೆಚ್ಚಿದರೆ? ವೇಗ ಹೆಚ್ಚದೆಯೂ ನಮಗೆ ಗೊತ್ತಿರಬೇಕಾದ ಇನ್ನೊಂದು ವಿಚಾರವೆಂದರೆ ಧ್ರುವ ಪ್ರದೇಶದಲ್ಲಿದ್ದಾಗ ನಮ್ಮ ತೂಕ 70 ಕೆಜಿ.ಯಷ್ಟು ಇದೆಯಾದರೆ ಭೂಮಧ್ಯರೇಖೆಯ ಆಸುಪಾಸಿನ ಸ್ಥಳಗಳಲ್ಲಿ ನೋಡಿಕೊಂಡರೆ ಒಂದರ್ಧ ಕೆಜಿ.ಯಾದರೂ ಕಡಿಮೆ ಇರುತ್ತದೆ. ಭೂಮಿ ತಿರುಗುವಾಗಿನ ಸೆಂಟ್ರಿಫ್ಯೂಗಲ್ ಫೋರ್ಸ್‌ನಿಂದಾಗಿ ಈ ವ್ಯತ್ಯಾಸ. ಅಂದಮೇಲೆ, ತೂಕ ಕಡಿಮೆ ಮಾಡಿಕೊಳ್ಳಲಿಕ್ಕೆ ಎಂಥೆಂಥ ಡಯಟ್‌ಗಳನ್ನೂ ವ್ಯಾಯಾಮಗಳನ್ನೂ ಮಾಡುವವರಿಗೆ ಭೂಮಿಯ ತಿರುಗುವಿಕೆ ವೇಗ ಹೆಚ್ಚುವುದು ಒಂದು ವರದಾನವಿದ್ದಂತೆ. ಆರಾಮಾಗಿ ನಿಂತಲ್ಲೇ ವೆಯ್ಟ್‌ಲಾಸ್! ಒಂದು ವೇಳೆ ಭೂಮಿಯು ಈಗಿನದಕ್ಕಿಂತ ಹತ್ತುಪಟ್ಟು ವೇಗದಲ್ಲಿ- ಅಂದರೆ ಗಂಟೆಗೆ 17641 ಮೈಲುಗಳಷ್ಟು- ತಿರುಗಿದರೆ ಗುರುತ್ವಾಕರ್ಷಣೆಗಿಂತ ಸೆಂಟ್ರಿಫ್ಯೂಗಲ್ ಫೋರ್ಸ್ ಹೆಚ್ಚಾಗುವುದರಿಂದ ಅತಿ ಬೊಜ್ಜಿನ ದಢೂತಿಗಳೂ, ಭೂಮಿಭಾರ ಎನಿಸಿಕೊಂಡವರೂ ಸೊನ್ನೆ ತೂಕದವರಾಗುತ್ತಾರೆ. ಮಿಟುಕಲಾಡಿ ಲಲನೆಯರಂತೂ ತರಗೆಲೆಯಂತೆ ಹಾರಾಡತೊಡಗುತ್ತಾರೆ (ಮೊದಲೇ ಅವರ ಹಾರಾಟಕ್ಕೇನೂ ಕಮ್ಮಿಯಿಲ್ಲ). ಆದರೆ ಇದೆಲ್ಲ ಜೀವಂತ ಉಳಿದಿದ್ದರೆ ಮಾತ್ರ ಎಂದು ಇನ್ನೊಂದು ಬ್ರ್ಯಾಕೆಟ್‌ನಲ್ಲಿ ಓದಿಕೊಳ್ಳಿ.
ಇನ್ನೊಂದು ಪರಿಣಾಮ, ಭೂಮಿಯ ವೇಗ ಹೆಚ್ಚಾದರೆ ನಮ್ಮ ಒಂದು ದಿನದ ಅವಧಿ ಕಡಿಮೆ ಆಗುವುದು. ಇಲ್ಲೂ ಅಷ್ಟೇ. ಗಂಟೆಗೆ ಒಂದು ಮೈಲಿಯಷ್ಟು ಮಾತ್ರ ವೇಗವೃದ್ಧಿ ಆದದ್ದಾದರೆ ದಿನದ ಅವಧಿ ಸುಮಾರು ಒಂದೂವರೆ ನಿಮಿಷದಷ್ಟು ಮಾತ್ರ ಕಡಿಮೆಯಾದೀತು. ಅದು ಅಷ್ಟೇನೂ ನಮ್ಮ ಗಮನಕ್ಕೆ ಬರಲಿಕ್ಕಿಲ್ಲ. ಗಂಟೆಗೆ 100 ಮೈಲುಗಳಷ್ಟು ವೇಗ ಹೆಚ್ಚಾದರೆ? ಆಗ ದಿನದ ಅವಧಿ 22 ಗಂಟೆಗಳು. ಗಡಿಯಾರವನ್ನು ಪ್ರತಿದಿನವೂ ಅಡ್ಜಸ್ಟ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ. ವರ್ಷಕ್ಕೊಮ್ಮೆ ಗಡಿಯಾರವನ್ನು ಮಾರ್ಚ್‌ನಲ್ಲಿ ಒಂದು ಗಂಟೆ ಮುಂದೂಡುವ, ನವೆಂಬರ್‌ನಲ್ಲಿ ಹಿಂದೆ ತರುವ ‘ಡೇ ಲೈಟ್ ಸೇವಿಂಗ್’ ಕ್ರಮ ಅಮೆರಿಕವೂ ಸೇರಿದಂತೆ ಪ್ರಪಂಚದ ಹಲವು ದೇಶಗಳವರಿಗೆ ಗೊತ್ತಿದ್ದದ್ದೇ. ಆದರೆ ಇದು ವರ್ಷಕ್ಕೊಮ್ಮೆ ಅಲ್ಲ, ಪ್ರತಿದಿನವೂ ಗಡಿಯಾರಗಳನ್ನು ಎರಡು ಗಂಟೆ ಮುಂದೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ. ರೈಲು-ವಿಮಾನಗಳ ಆಗಮನ ನಿರ್ಗಮನ ಸಮಯ, ಶಾಲೆ-ಕಾಲೇಜುಗಳ ಆರಂಭದ ಸಮಯ, ಕೊನೆಗೆ ಟಿವಿಯಲ್ಲಿ ‘ಮಗಳು ಜಾನಕಿ’ಯ ಪ್ರಸಾರ ಸಮಯಗಳೆಲ್ಲ ಟೋಟಲ್ ಕನ್‌ಫ್ಯೂಷನ್. ನಮಗಷ್ಟೇ ಅಲ್ಲ ಗಿಡ-ಮರ ಪ್ರಾಣಿ-ಪಕ್ಷಿಗಳಿಗೂ ಗೊಂದಲವೋ ಗೊಂದಲ. ನೆನಪಿಡಿ: ಭೂಮಿ ಸಡನ್ನಾಗಿ ವೇಗ ಹೆಚ್ಚಿಸಿದರೆ ಮಾತ್ರ ಇದೆಲ್ಲ ಆಗುವುದು. ಮಿಲಿಯಗಟ್ಟಲೆ ವರ್ಷಗಳಲ್ಲಿ ನಿಧಾನವಾಗಿ ವೇಗ ಹೆಚ್ಚಿಸಿಕೊಂಡರೆ ನಮಗೇನೂ ಗೊತ್ತೇ ಆಗುವುದಿಲ್ಲ.
ಮತ್ತೊಂದು ಭೀಕರ ಪರಿಣಾಮ, ಭೂಮಂಡಲದ ಸುತ್ತಲಿನ ಗಾಳಿಯ ವೇಗ ಹೆಚ್ಚುವುದು. ಅಂದರೆ ಚಂಡಮಾರುತಗಳೆಲ್ಲ ಆಗ ‘ಪ್ರಚಂಡ’ಮಾರುತ ಎನಿಸುವವು. ಯಾಕೆ ಹೀಗೆ? ಇದಕ್ಕೂ ಭೂಮಧ್ಯರೇಖೆಯ ಬಳಿ ಭೂಮಿಯ ತಿರುಗುವಿಕೆ ವೇಗ ಹೆಚ್ಚು ಇರುವುದೇ ಕಾರಣ. ಒಂದೊಮ್ಮೆ ಭೂಮಿ ತನ್ನ ಅಕ್ಷದ ಸುತ್ತ ತಿರುಗುವುದೇ ಇಲ್ಲ ಎಂದು ಊಹಿಸಿ. ಆಗ, ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಬೀಸುವ ಚುಂಬಕ ಗಾಳಿಯು ಉದ್ದಕ್ಕೆ ಒಂದು ಸರಳ ರೇಖೆಯಲ್ಲಿ ಇರುತ್ತದೆ. ಆದರೆ ನಮ್ಮ ಭೂಮಿ ಬುಗುರಿಯಂತೆ ತಿರುಗುತ್ತಲೇ ಇರುತ್ತದಾದ್ದರಿಂದ ಗಾಳಿ ಬೀಸುವಿಕೆಗೆ ತೊಡಕಾಗುತ್ತದೆ. ಇದಕ್ಕೆ ‘ಕೋರಿಯೊಲಿಸ್ ಎಫೆಕ್ಟ್’ ಎಂದು ಹೆಸರು. ಗಾಳಿಯು ಭೂಗೋಲದ ಪಶ್ಚಿಮದಿಂದ ಪೂರ್ವಕ್ಕೆ ಬೀಸುತ್ತದೆ. ಇಲ್ಲೊಂದು ಸಾಮಾನ್ಯ ಜ್ಞಾನದ ಅಂಶ. ಗಾಳಿಯು ಪಶ್ಚಿಮದಿಂದ ಪೂರ್ವಕ್ಕೆ ಬೀಸುವುದು ವಿಮಾನಗಳ ಚಲನೆಗೆ ಅನುಕೂಲ/ಪ್ರತಿಕೂಲ ಆಗುತ್ತದೆ- ಹೇಗೆಂದರೆ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಲುಫ್ತಾನ್ಸಾ ವಿಮಾನವು ಪಶ್ಚಿಮದಿಂದ ಪೂರ್ವಕ್ಕೆ ಗಾಳಿಯ ದಿಕ್ಕಿನಲ್ಲೇ ಸಾಗುವುದರಿಂದ ಬೇಗ ತಲುಪುತ್ತದೆ. ಬೆಂಗಳೂರಿನಿಂದ ಫ್ರಾಂಕ್‌ಫರ್ಟ್‌ಗೆ (ಪೂರ್ವದಿಂದ ಪಶ್ಚಿಮಕ್ಕೆ, ಗಾಳಿಯ ದಿಕ್ಕಿಗೆ ವಿರುದ್ಧವಾದ್ದರಿಂದ) ತಲುಪಲು ಒಂದರ್ಧ ಗಂಟೆಯಾದರೂ ಹೆಚ್ಚು ಸಮಯ ಬೇಕಾಗುತ್ತದೆ. ಅಂತೂ ಭೂಮಿ ತಿರುಗುವ ವೇಗ ಹೆಚ್ಚಿದರೆ ಗಾಳಿಯ ವೇಗವೂ ಹೆಚ್ಚುತ್ತದೆ. ಚಂಡಮಾರುತ ಎದ್ದರೆ, ಅದರ ಸುಳಿ ಅಥವಾ ‘ಕಣ್ಣು’ ಸುತ್ತುವ ವೇಗವೂ ಹೆಚ್ಚಾಗಿ ಪ್ರಚಂಡಮಾರುತ ಆಗುತ್ತದೆ. ಆಸ್ತಿಪಾಸ್ತಿ ಹಾನಿ, ಸಾವು-ನೋವು ನಷ್ಟಗಳ ಪ್ರಮಾಣ ಹೆಚ್ಚುತ್ತದೆಂದು ಬೇರೆ ಹೇಳಬೇಕಿಲ್ಲ.
ಭೂಮಿ ತಿರುಗುವ ವೇಗ ಹೆಚ್ಚಾದರೆ ಭೂಮಧ್ಯರೇಖೆಯ ಆಸುಪಾಸಿನಲ್ಲಿ ಸಮುದ್ರಗಳ ಮಟ್ಟ ಒಂದಿಷ್ಟು ಇಂಚುಗಳಷ್ಟು ಹೆಚ್ಚುತ್ತದೆಂದು ಆಗಲೇ ತಿಳಿದುಕೊಂಡೆವಷ್ಟೆ? ಅದು ಗಂಟೆಗೆ ಒಂದು ಮೈಲು ವೇಗ ಹೆಚ್ಚಳದ ಮಾತಾಯ್ತು. ಗಂಟೆಗೆ 100 ಮೈಲು ವೇಗ ಹೆಚ್ಚಳವಾದರೆ ನೀರಿನ ಮಟ್ಟ ಇನ್ನೂ ಏರಿ ಬಹಳಷ್ಟು ಭೂಭಾಗಗಳು ಮುಳುಗಿ ಹೋಗುವವು. ಅಮೆಜಾನ್ ಅರಣ್ಯ ಪ್ರದೇಶದಿಂದ ಹಿಡಿದು ಆಸ್ಟ್ರೇಲಿಯಾದ ಮರುಭೂಮಿಗಳೆಲ್ಲ ಸುಮಾರು 30ರಿಂದ 65 ಅಡಿಗಳಷ್ಟು ಆಳಕ್ಕೆ ಇಳಿಯುವವು. ಭೂಮಿ ತಿರುಗುವ ವೇಗ ಗಂಟೆಗೆ 1000 ಮೈಲು ಹೆಚ್ಚಳವಾದರಂತೂ ನಿಜಕ್ಕೂ ಪ್ರಳಯಸದೃಶ ಎನಿಸಬಹುದು. ಸೆಂಟ್ರಿಫ್ಯೂಗಲ್ ಫೋರ್ಸ್‌ನಿಂದಾಗಿ ಸಮುದ್ರಗಳಲ್ಲಿ ನೂರಾರು ಅಡಿ ಉಬ್ಬರ ಕಂಡುಬಂದು ಭೂಮಿಯ ಮೇಲಿನ ಎತ್ತರೆತ್ತರದ ಪರ್ವತಗಳೂ ನೀರಿನಿಂದ ಆವೃತ್ತವಾಗುವವು. ಹೆಚ್ಚೆಂದರೆ ಕಿಲಿಮಾಂಜರೊ ಪರ್ವತ ಮತ್ತು ನಮ್ಮ ಮೌಂಟ್ ಎವರೆಸ್ಟ್‌ನಂಥವು ಒಂಚೂರು ನೆತ್ತಿಯನ್ನು ತೋರಿಸುತ್ತ ನಿಂತಿರಬಹುದು ಅಷ್ಟೇ.
ಈ ಹೆಚ್ಚುವರಿ ನೀರು ಬರುವುದೆಲ್ಲಿಂದ? ಧ್ರುವಪ್ರದೇಶದ ಸಮುದ್ರಗಳಿಂದ. ಹಾಗಾಗಿ ಅಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತದೆ. ಭೂಮಧ್ಯರೇಖೆಯ ಬಳಿ ಭೂಮಿಯ ತಿರುಗುವಿಕೆ ವೇಗ ಹೆಚ್ಚಾದಾಗ ಗುರುತ್ವಾಕರ್ಷಣ ಕಡಿಮೆಯಾಗುವುದರಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚುತ್ತದೆ. ದಟ್ಟ ಮೋಡಗಳು ಮತ್ತು ಮಂಜು ಕವಿದಂತೆ ಭಾಸವಾಗುತ್ತದೆ. ನಿರಂತರ ಮಳೆ ಸುರಿಯುತ್ತದೆ. ತಿರುಗುವಿಕೆಯ ವೇಗ ಗಂಟೆಗೆ 17000 ಮೈಲುಗಳಷ್ಟಾದರೆ ಇನ್ನೊಂದು ವಿಚಿತ್ರ ವಿದ್ಯಮಾನ ಜರುಗುತ್ತದೆ. ಗುರುತ್ವಾಕರ್ಷಣ ಶಕ್ತಿಗಿಂತ ಸೆಂಟ್ರಿಫ್ಯೂಗಲ್ ಫೋರ್ಸ್ ಹೆಚ್ಚಾಗುವುದರಿಂದ ಮಳೆ ಹನಿಗಳು ಆಕಾಶದಿಂದ ಭೂಮಿಗೆ ಬೀಳುವ ಬದಲಿಗೆ, ಭೂಮಿಯಿಂದ ಆಕಾಶಕ್ಕೆ ಚಿಮ್ಮುತ್ತವೆ! ಅಂತಹ ಮಳೆಯಲ್ಲಿ ಒದ್ದೆಯಾಗದಂತೆ ಛತ್ರಿ ಯಾವ ನಮೂನೆಯದಿರಬೇಕು, ಅದನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ನೀವೇ ಊಹಿಸಿ. ಬದುಕುಳಿದಿದ್ದರೆ ಮಾತ್ರ ಎಂದು ಬ್ರ್ಯಾಕೆಟ್‌ನಲ್ಲಿ ಸೇರಿಸುವುದನ್ನು ಮರೆಯಬೇಡಿ. ವೇಗ ಮತ್ತಷ್ಟು ಹೆಚ್ಚಿದರೆ- ಗಂಟೆಗೆ 24000 ಮೈಲುಗಳಷ್ಟಾದರೆ- ಕ್ರಮೇಣ ನಮ್ಮ ಭೂಮಿ ಗೋಲಾಕಾರವಿರುವುದು ಚಪ್ಪಟೆಯಾಗುತ್ತದೆ. ಹೀಗೆ ಅದು ಆಕಾರ ಬದಲಾಯಿಸುವಾಗ ಅಲ್ಲಲ್ಲಿ ಅತಿ ಭಯಂಕರ ಭೂಕಂಪಗಳಾಗಬೇಕಾಗುತ್ತದೆ. ಜೀವಿಗಳು ಬದುಕುಳಿದಿದ್ದರೆ ಭೂಕಂಪಗಳು ಅವನ್ನೆಲ್ಲ ನುಂಗಿ ನೊಣೆಯುತ್ತವೆ.
ಇಷ್ಟೆಲ್ಲ ಭಯಾನಕ ಚಿತ್ರಣವನ್ನು ಕೊಟ್ಟದ್ದು ಹೀಗೇ ಆಗುತ್ತದೆ ಎಂದಲ್ಲ. ಅಲ್ಲದೇ ಆಗಲೇ ಹೇಳಿದಂತೆ ಸಡನ್ನಾಗಿ ವೇಗ ಹೆಚ್ಚಿದರೆ ಮಾತ್ರ ಇವೆಲ್ಲ ದುಷ್ಪರಿಣಾಮಗಳ ಸಂಭವ. ಮಿಲಿಯಗಟ್ಟಲೆ ವರ್ಷಗಳಲ್ಲಿ, ಅಂದರೆ ‘ಓವರ್ ಎ ಪಿರಿಯಡ್ ಆಫ್ ಟೈಮ್’ ಎಂಬಂತೆ ವೇಗ ಬದಲಾವಣೆಯಾದರೆ ಇಂಥ ತೊಂದರೆಗಳಿಲ್ಲ. ಅಷ್ಟಾಗಿ, ಭೂಮಿ ತಿರುಗುವ ವೇಗ ಅಲ್ಪಸ್ವಲ್ಪ ಹೆಚ್ಚೂಕಡಿಮೆ ಆಗುತ್ತಲೇ ಇರುತ್ತದೆ. ಚಿಕ್ಕಪುಟ್ಟ ಭೂಕಂಪಗಳು, ಸುನಾಮಿ, ಹಿಮಪಾತ ಮುಂತಾದ ಪ್ರಾಕೃತಿಕ ಘಟನೆಗಳೆಲ್ಲ ಭೂಮಿಯ ವೇಗದ ಮೇಲೆ ಪರಿಣಾಮ ಬೀರುತ್ತಿರುತ್ತವೆ. ಭೂಕಂಪದಿಂದ ಸ್ವಲ್ಪ ಭೂಭಾಗ ಒಳಕ್ಕೆ ಹೋದರೆ ಒಟ್ಟಾರೆ ಭೂಗೋಲದ ವ್ಯಾಸ ಕಡಿಮೆಯಾಗುವುದರಿಂದ ತಿರುಗುವ ವೇಗ ಮಿಲಿ ಸೆಕೆಂಡುಗಳಷ್ಟು ಹೆಚ್ಚಾಗುವುದು, ಬಲವಾದ ಗಾಳಿ ಬೀಸಿದಾಗ ಭೂಮಿಯ ವೇಗ ಮಿಲಿ ಸೆಕೆಂಡುಗಳಷ್ಟು ಕಡಿಮೆಯಾಗುವುದು- ಇದೆಲ್ಲ ಆಗುತ್ತಲೇ ಇರುತ್ತದೆ. ನಮ್ಮ ಗಮನಕ್ಕೆ ಬರುವುದಿಲ್ಲ ಅಷ್ಟೇ.
ಇನ್ನೂ ಒಂದು ಸ್ವಾರಸ್ಯಕರ ವಿಚಾರವೆಂದರೆ, ಸುಮಾರು ನಾಲ್ನೂರೈವತ್ತು ಕೋಟಿ ವರ್ಷಗಳ ಹಿಂದೆ ಭೂಮಿಗೆ ಯಾವುದೋ ವಸ್ತು ಬಂದು ಅಪ್ಪಳಿಸಿದಾಗ ಒಂದು ತುಂಡು ಸಿಡಿದು ಅದೇ ಚಂದ್ರನಾಗಿ ಭೂಮಿಯ ಸುತ್ತ ಸುತ್ತತೊಡಗಿದ್ದು ಎನ್ನುತ್ತಾರೆ ವಿಜ್ಞಾನಿಗಳು. ಅದಕ್ಕೆ ಮುಂಚೆ ಬಹುಶಃ ಭೂಮಿಯ ಆಕಾರ ಒಂದು ಚಪ್ಪಟೆ ಫುಟ್‌ಬಾಲ್‌ನಂತೆ ಇತ್ತು. ತಿರುಗುವ ವೇಗ ತುಂಬ ಹೆಚ್ಚಿತ್ತು. ಆಗ ಭೂಮಿಯ ಮೇಲೆ ಹಗಲು ರಾತ್ರಿಯ ಅವಧಿ ಹೆಚ್ಚೆಂದರೆ ನಾಲ್ಕು ಗಂಟೆಗಳಷ್ಟೇ ಇರುತ್ತಿತ್ತು. ಆದರೆ ಚಂದ್ರ ಜನ್ಮತಾಳಿದ ಬಳಿಕ ಪರಿಸ್ಥಿತಿ ಸುಧಾರಿಸಿತು. ಭೂಮಿ ತಿರುಗುವ ವೇಗ ಕ್ರಮೇಣ ಕಡಿಮೆಯಾಗತೊಡಗಿತು. ಪ್ರತಿ ಒಂದು ಕೋಟಿ ವರ್ಷಗಳಲ್ಲಿ ಸುಮಾರು ಗಂಟೆಗೆ ನಾಲ್ಕು ಮೈಲುಗಳಷ್ಟು ವೇಗ ಕಡಿಮೆಯಾಗುತ್ತ ಬಂತು. ಭೂಮಿಯ ಮೇಲೆ ಚಂದ್ರನ ಗುರುತ್ವಾಕರ್ಷಣ ಬಲವಿರುವುದು ಕೂಡ ಇದಕ್ಕೆ ಮುಖ್ಯ ಕಾರಣ. ಹಾಗಾಗಿ ಚಂದ್ರನಿರುವಷ್ಟೂ ಕಾಲ ಭೂಮಿಯ ವೇಗ ಹೆಚ್ಚುವ ಯಾವುದೇ ಸಾಧ್ಯತೆಗಳಿಲ್ಲ. ಇನ್ನೆಲ್ಲಿಯಾದರೂ ಹೊಸದೊಂದು ವಸ್ತು ಬಂದು ಭೂಮಿಯನ್ನೂ ಚಂದ್ರನನ್ನೂ ಅಪ್ಪಳಿಸಿದರೆ ಆಗ ಗೋವಿಂದಾ!
ಹಾಗೆಲ್ಲ ಆಗಬಾರದು ಎಂದೇ ‘ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ| ದೇಶೋಽಯಂ ಕ್ಷೋಭರಹಿತಃ ಸಜ್ಜನಾಃ ಸಂತು ನಿರ್ಭಯಾಃ’ (ಕಾಲಕಾಲಕ್ಕೆ ಮಳೆಯಾಗಲಿ. ಪೃಥ್ವಿಯು ಸಸ್ಯಶ್ಯಾಮಲೆಯಾಗಿರಲಿ. ದೇಶದಲ್ಲಿ ಕ್ಷೋಭೆ ಇಲ್ಲದಿರಲಿ. ಸಜ್ಜನರು ನಿರ್ಭಯದಿಂದ ಇರುವಂತಾಗಲಿ) ಎಂದು ನಮ್ಮ ಋಷಿಮುನಿಗಳ ವಿಶಾಲವಾದ ಚಿಂತನೆ ಇರುವುದು. ಭೂಮಿ ಬಣ್ಣದ ಬುಗುರಿಯಾಗಿದ್ದರೂ ಚಾಟಿ ಶಿವನ ಕೈಯಲ್ಲಿರುವುದರಿಂದ ಸಮಾಧಾನ. ಇದೊಂದು ಸುಂದರ ನಗರಿ, ಸಕಲ ಜೀವಿಗಳೂ ಇದರ ಮೇಟಿ (ವಾರೀಸುದಾರರು) ಎಂದು ತಿಳಿದುಕೊಂಡು ಸಹಬಾಳ್ವೆ ನಡೆಸಿದರೆ ಲೋಕಕಲ್ಯಾಣ.
* * *