02/08/2026
ಅನುದಿನದ ಆಹಾರ
📅 ಆಗಸ್ಟ್ *2*, 2026 - ಭಾನುವಾರ
📌 ಬೇಡಿದಂತೆಯೇ!
ಆತನು ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ. (1ಸಮು1:27)
ಸತ್ಯವೇದದಲ್ಲಿ ಮಕ್ಕಳಿಲ್ಲದ ಸಮಸ್ಯೆ ಮೊದಲು ಅಬ್ರಹಾಮ ಮತ್ತು ಸಾರಾಳಿಗೆ ಬಂದಿತು. ಆ ಕಾಲದಲ್ಲಿ ಬಂಜೆತನ ಶಾಪವೆಂದು ಜನರು ಪರಿಗಣಿಸಿದ್ದರು. ಕುಟುಂಬದ ಮಧ್ಯದಲ್ಲಿ ಅದು ನಿಂದೆ, ಅವಮಾನಗಳಿಗೆ ಕಾರಣವಾಗಿತ್ತು. ಕರ್ತನಾದರೋ ನೀವು ಹಬ್ಬಿ, ಹೆಚ್ಚಿ, ಭೂಮಿಯನ್ನು ತುಂಬಿರಿ ಎಂದು ವಾಗ್ದಾನ ಮಾಡಿರುವನು.
ನ್ಯಾಯಾಧಿಪತಿಗಳ ಕಾಲದಲ್ಲಿ ಮಾನೋಹನಿಗೂ ಅವನ ಹೆಂಡತಿಗೂ ಮಕ್ಕಳಿರಲಿಲ್ಲ. (ನ್ಯಾಯ.13:2). ಆಗ ದೇವದೂತನು ಮಾನೋಹನ ಹೆಂಡತಿಯ ಬಳಿ “ಇಗೋ ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು ಗರ್ಭವತಿಯಾಗಿ ಮಗನನ್ನು ಹೆರುವಿ” ಎಂದು ಹೇಳಿದನು. (ನ್ಯಾಯ.13:3). ಎಲ್ಕಾನನಿಗೂ ಹನ್ನಳಿಗೂ ಮಕ್ಕಳಿರಲಿಲ್ಲ, ಹನ್ನಳು ಕರ್ತನಲ್ಲಿ ಹೋರಾಡಿ, ಪ್ರಾರ್ಥಿಸಿ ಮಗುವನ್ನು ಪಡೆಯಲು ದೇವಾಲಯಕ್ಕೆ ಬಂದಳು. ಬಹಳವಾಗಿ ಮನನೊಂದು ಅತ್ತು ಪ್ರಾರ್ಥಿಸಿ ಸಮುವೇಲನನ್ನು ಪಡೆದಳು. ಅವನನ್ನು ದೇವರಿಗಾಗಿ ಪ್ರತಿಷ್ಠೆಪಡಿಸಿದಳು. ಕರ್ತನು ಅವಳ ಕಾರ್ಯವನ್ನು ಕಂಡು ಇನ್ನೂ ಐದು ಮಕ್ಕಳನ್ನು ಅನುಗ್ರಹಿಸಿದನು. ದಾವೀದನನ್ನು ನಿಂದಿಸಿದ್ದರ ನಿಮಿತ್ತ ಅವನ ಹೆಂಡತಿಯಾದ ಮೀಕಳಿಗೆ ದಾವೀದನ ಮೂಲಕ ಮಕ್ಕಳಾಗಲೇ ಇಲ್ಲ. ಶೂನೇಮ್ಯಳು ಪ್ರವಾದಿಯಾದ ಎಲೀಷನನ್ನು ಸತ್ಕರಿಸಿದ ನಿಮಿತ್ತ ಕರ್ತನು ಅವಳಿಗೆ ಒಂದು ಮಗುವನ್ನು ದಯಪಾಲಿಸಿದನು. ಹೊಸ ಒಡಂಬಡಿಕೆಗೆ ಬರುವಾಗ ಜಕರಿಯ ಮತ್ತು ಎಲಿಜಬೇತಳಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ಮುಪ್ಪಡರಿತು, ಆಗ ಕರ್ತನ ದೂತನು ಪ್ರತ್ಯಕ್ಷನಾಗಿ, ಸ್ನಾನಿಕನಾದ ಯೋಹಾನನ ಜನನವನ್ನು ಅವರಿಗೆ ತಿಳಿಸಿದನು. ಬಂಜೆಯಾದ ತನ್ನ ಹೆಂಡತಿಗಾಗಿ ಇಸಾಕನು ಕರ್ತನಲ್ಲಿ ಬೇಡಿದನೆಂದು ಆದಿ.25:21ರಲ್ಲಿ ಓದುತ್ತೇವೆ. ಕೆಲವು ಭಾಷಾಂತರಗಳಲ್ಲಿ ತನ್ನ ಹೆಂಡತಿಯೊಡನೆ ಇಸಾಕನು ಕರ್ತನನ್ನು ಬೇಡಿದನು ಎಂದು ಬರೆಯಲ್ಪಟ್ಟಿದೆ. ಇಸಾಕನು ಹೆಂಡತಿಯೊಂದಿಗೆ ಸೇರಿ ಪ್ರಾರ್ಥಿಸಿದನು. ಇದೇ ಒಂದು ಮನಸ್ಸಿನ ಪ್ರಾರ್ಥನೆ.
ದೇವಮಕ್ಕಳೇ, ನಿಮ್ಮ ಅಗತ್ಯತೆಗಳನ್ನು ಕರ್ತನಿಗೆ ತಿಳಿಯಪಡಿಸಿ, ಅದಕ್ಕಾಗಿ ಭಾರದಿಂದ ಪ್ರಾರ್ಥಿಸುವಾಗ, ನಿಶ್ಚಯವಾಗಿ ಕರ್ತನು ನಿಮಗೆ ಸದುತ್ತರವನ್ನು ದಯಪಾಲಿಸುವನು. ಅಷ್ಟು ಮಾತ್ರವಲ್ಲ ಕುಟುಂಬವಾಗಿ ಪ್ರಾರ್ಥಿಸುವಾಗ ಪ್ರಾರ್ಥನೆಯ ಬಲ ಅಧಿಕವಾಗಿರುವದು.
- - - - - - - -
Subscribe to our YouTube Channel
GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/