09/11/2022
*ನಮಸ್ಕಾರ ನಿಮ್ಮ ಶ್ರೀ ಭೀಮೇಶ್ವರ ಸ್ವಾಮಿ ಸಾನಿದ್ಯದಿಂದ ದಿನಕ್ಕೊಂದು ಕಥೆ ಅನ್ನುವ ಶೇರ್ಷಿಕೆಯಲ್ಲಿ ಇಂದಿನಿಂದ ನಮ್ಮ ಸಾನತಾನ ಧರ್ಮದ ಬಗ್ಗೆ ದೇವರ ಬಗ್ಗೆ ತಿಳಿಯೋಣ
ಈ ದಿನ ಗಣಪತಿ ಕಥೆ ತಿಳಿಯೋಣ*
ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಅಗ್ರಜ ಸ್ಥಾನ ಪಡೆದಿರುವ ವಿಘ್ನ ವಿನಾಯಕನಿಗೆ ಮೊದಲ ಪೂಜೆ ಸಲ್ಲುತ್ತದೆ. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.
ಶಿವಪುರಾಣದಲ್ಲಿ ಗಣೇಶನ ಜನ್ಮ ರಹಸ್ಯ
ಕೈಲಾಸದಲ್ಲಿ ಪಾರ್ವತಿದೇವಿಯು ತನ್ನ ಸಖಿಯರ ಜೊತೆಯಲ್ಲಿರುವಾಗ ಅಲ್ಲಿಗೆ ಪರಶಿವನ ಆಗಮನವಾಗುತ್ತೆ. ದ್ವಾರವನ್ನು ಕಾಯಲು ಗಣವೊಂದು ಇಟ್ಟಿದ್ದರೂ ಕೂಡ ಈ ರೀತಿ ತನ್ನ ಪತಿಯೇ ಆಗಲಿ ಅನಪೇಕ್ಷಿತವಾಗಿ ಒಳಗೆ ಬಂದದ್ದು ಪಾರ್ವತಿಗೆ ಸ್ವಲ್ಪ ಅಸಮಧಾನವನ್ನು ಉಂಟುಮಾಡಿತು. ಇದಕ್ಕಾಗಿ ಪಾರ್ವತಿ ಒಂದು ನಿರ್ಣಯಕ್ಕೆ ಬರುತ್ತಾಳೆ. ಸ್ನಾನಕ್ಕಾಗಿ ಹೋಗುವ ಮೊದಲು ತನ್ನ ಮೈಯಲ್ಲಿರುವ ಮಣ್ಣಿನಿಂದ ಮುದ್ದಾದ ಒಂಗು ಮಗುವನ್ನು ನಿರ್ಮಿಸಿ, ಅದಕ್ಕೆ ಜೀವ ತುಂಬಿದಳು. ಅವನ ಕೈಯಲ್ಲಿ ದಂಡವೊಂದನ್ನು ಕೊಟ್ಟು ಸ್ನಾನಗ್ರಹದ ಬಾಗಿಲು ಕಾಯಲು ನೇಮಿಸಿದಳು. ನಂತರ ಯಥಾವತ್ತಾಗಿ ಅಪೇಕ್ಷಿತವೆಂಬಂತೆ ಕೈಲಾಸಪತಿಯ ಆಗಮನವಾಗುತ್ತೆ. ಈ ಪುಟ್ಟ ದ್ವಾರಪಾಲಕ ತನ್ನ ದಂಡವನ್ನು ಶಿವನ ಮುಂದೆ ಅಡ್ಡವಾಗಿಸಿ ಒಳಗೆ ಪ್ರವೇಶಿಸದಂತೆ ನಿರ್ಭಂಧಿಸುತ್ತಾನೆ. ಇದೇನು, ಈ ಹುಡುಗ, ಯವನೋ ಹೊಸಬ, ನನ್ನನ್ನು ತಡೆಯುತ್ತಿರುವನಲ್ಲ ಎಂದು ಕೋಪಿಸಿಗೊಂಡ ರುದ್ರ ಯಾರು ನೀನು? ಎಂದು ಅವನ ಕುರಿತು ಕೇಳುತ್ತಾನೆ.
ನಾನು ಪಾರ್ವತಿಯ ಮಗ, ಅವಳ ಸೇವಕ, ತಾಯಿಯ ಆಜ್ಞೆ ಮೇರೆಗೆ ಯಾರನ್ನು ಒಳ ಹೋಗಲು ಬಿಡಲು ಸಾಧ್ಯವಿಲ್ಲ. ಆದ್ದರಿಂದ ನಿನ್ನನ್ನು ಒಳಹೋಗಲು ಬಿಡುವುದಿಲ್ಲ ಎಂದು ಬಾಲಕ ಶಿವನಿಗೆ ಹೇಳುತ್ತಾನೆ. ಇದನ್ನು ಕೇಳಿ ರುದ್ರಗಣಗಳು ಸಿಟ್ಟಿನಿಂದ ಅವನ ಮೇಳೆ ಮುಗಿಬೀಳಲು, ಒಬ್ಬೊಬ್ಬರನ್ನು ಥಳಿಸಿ ತನ್ನ ಪರಾಕ್ರಮವನ್ನು ತೋರುತ್ತಾನೆ. ಇದೆಲ್ಲವನ್ನು ನೋಡುತ್ತಿದ್ದ ಶಿವ ತನ್ನ ಗಣಗಳ ಸೋಲು ಮತ್ತು ಈ ಹುಡುಗನ ಉದ್ಧಟತನದಿಂದ ಕ್ರೋಧಿತನಾಗಿ ತನ್ನ ಶೂಲದಿಂದ ಅವನ ಶಿರವನ್ನು ಕತ್ತರಿಸುತ್ತಾನೆ.
ತನ್ನ ಪತಿಯ ಈ ಕೃತ್ಯವನ್ನು ನೋಡಿದ ಪಾರ್ವತಿಯು ಪುತ್ರನ ಮರಣದಿಂದ ಶೋಕಿತಳಾಗಿ ರೋಧಿಸಲಾರಂಭಿಸಿದಳು. ಗೌರಿಯು ಕ್ಷಣಾರ್ಧದಲ್ಲಿ ದುರ್ಗೆಯಾಗಿ ಅನೇಕ ಮಹಾಶಕ್ತಿಗಳನ್ನು ಸೃಷ್ಟಿಸಿ ರುದ್ರಗಣಗಳ ಮೇಲೆ ಬಿಡುತ್ತಾಳೆ. ಇದರಿಂದ ಗಾಬರಿಗೊಂಡ ಗಣಗಳು ಶಿವನನ್ನು ಶರಣು ಬಂದು ಪ್ರಾರ್ಥಿಸುತ್ತಾರೆ. ಪಾರ್ವತಿಯನ್ನು ಸಮಾಧಾನ ಪಡಿಸಲು ಶಿವನು ಬಾಲಕನನ್ನು ಬದುಕಿಸುವದಾಗಿ ಹೇಳಿ, ತನ್ನ ಭಟರಿಗೆ ಉತ್ತರ ದಿಕ್ಕಿಗೆ ಹೋಗಿ ಮೊದಲು ಸಿಗುವ ಪ್ರಾಣಿಯ ತಲೆಯನ್ನು ತರಲು ಆಜ್ಞಾಪಿಸಿದನು. ಅಂತೆ ಉತ್ತರಕ್ಕೆ ತಲೆ ಹಾಕಿ ಮಲಗಿದ್ದ ಆನೆಯನ್ನು ಶಿರವನ್ನು ಕತ್ತರಿಸಿಕೊಂಡು ತರುತ್ತಾರೆ. ಶಂಕರನು ಆ ಬಾಲಕನ ಮುಂಡಕ್ಕೆ ಆನೆಯ ತಲೆಯನ್ನು ಸರಿಯಾಗಿ ಜೋಡಿಸಿ, ಅವನನ್ನು ಪುನಃ ಬದುಕಿಸಿದನು. ಉಮೆಯು ಬಂದು ಆ ಬಾಲಕನನ್ನು ಮುದ್ದಿಸಿ ತನ್ನ ಮಗನಾದ ಗಜಮುಖನಿಗೆ ವರಗಳನ್ನು ದಯಪಾಲಿಸುವಂತೆ ಮಹೇಶ್ವರನನ್ನು ಕೇಳಿಕೊಂಡಳು. ಇಂದಿನಿಂದ ನೀನು ನನ್ನ ಕಿರಿಯ ಮಗನೆಂದೂ, ಸರ್ವಕಾರ್ಯಗಳಲ್ಲಿ ನೀನೆ ಪ್ರಥಮಪೂಜಿತನಾಗೆಂದೂ, ಸಕಲ ರುದ್ರಗಣಗಳ ಅಧಿಪತಿಯಾಗು ಎಂದು ಹರ ಹರಸಿದನು. ಹೀಗೆ ಪಶುಪತಿಯ ಮಗ ಗಣಪತಿಯು ಜಗತ್ಪ್ರಸಿದ್ಧನಾದನು.
( ಸಂಗ್ರಹ )
ನಾಳೆ ಸಿಗೋಣ 🤚
ಇಂತಿ :
ವೇ || ಬ್ರ || ಶ್ರೀ || ಎಸ್ || ಯೋಗೇಶ್
ಶೈವಾಗಮ ಪ್ರವೀಣ, ಪ್ರಧಾನ ಅರ್ಚಕರು, ಪುರೋಹಿತರು, ಜ್ಯೋತಿಷಿಗಳು, ಶ್ರೀ ಭೀಮೇಶ್ವರ ಸ್ವಾಮಿ ದೇವಸ್ಥಾನ, ಮಾಕಳಿ, ದಾಸನಪುರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು