28/05/2024
ಇತಿಹಾಸಕ್ಕೆ ಕೊಡಲಿ ಪೆಟ್ಟು : ನಮ್ಮ ಬೇಗೂರು ಬಂಧುಗಳೇ. ಬೆಂಗಳೂರಿನ ಇತಿಹಾಸದಲ್ಲಿ ಅತಿ ಪ್ರಾಚೀನವಾದ ಗ್ರಾಮವೆಂದರೆ, ನಮ್ಮ ಬೇಗೂರು ಗ್ರಾಮವೇ ಆಗಿದ್ದು, ಇದಕ್ಕೆ ಒಂದು ಸಾವಿರಕ್ಕೂ ಹೆಚ್ಚು ವರುಷಗಳ ಇತಿಹಾಸ ಉಳಿದುಬಂದಿದೆ. ಇಲ್ಲಿನ ಪಂಚಲಿಂಗ ದೇಗುಲ ಹಾಗೂ ಪುರಾತನ ಕೋಟೆಯು ಇತಿಹಾಸ ಪ್ರಸಿದ್ಧವಾಗಿದ್ದು ನಮ್ಮ ಹೆಮ್ಮೆಯ ತಾಣವಾಗಿದೆ. ಇಲ್ಲಿನ ಸ್ಮಾರಕಗಳ ಸಂರಕ್ಷಣೆಯ ದೃಷ್ಟಿಯಿಂದ ನಾವೆಲ್ಲರೂ ಕೂಡಿ ʻಇತಿಹಾಸ ರಕ್ಷಣಾ ಸಮಿತಿʼ ಒಂದನ್ನು ಆಯೋಜಿಸಿಕೊಂಡಿರುವುದು ನಿಮಗೆಲ್ಲ ತಿಳಿದ ಸಂಗತಿ.
ಸದ್ಯದಲ್ಲಿ ಬೇಗೂರಿನ ಇತಿಹಾಸಕ್ಕೆ ಕೊಡಲಿಯ ಪೆಟ್ಟೊಂದು ಬೀಳುತ್ತಿದ್ದು ಇಲ್ಲಿ ಕೋಟೆಯ ಆವರಣವು ಖಾಸಗಿ ವ್ಯಕ್ತಿಗಳಿಂದ ಕೊಳ್ಳೆ ಮಾಡಲಾಗುತ್ತಿದೆ. ಸದ್ಯದಲ್ಲಿ ಬೇಗೂರಿನ ಕೋಟೆಯ ಸುತ್ತಲೂ ಇದ್ದ ನೀರಿನ ಕಂದಕವನ್ನು ಮುಚ್ಚಲಾಗಿರುವುದಲ್ಲದೆ, ಅದನ್ನು ಆವರಿಸಿಕೊಂಡು ಭೂ-ವ್ಯವಹಾರದ ವ್ಯಕ್ತಿಗಳಿಂದ ಆಕ್ರಮಣಕ್ಕೆ ಒಳಗಾಗುತ್ತಿದೆ. ನಾವೆಲ್ಲರೂ ಇಂದು (24-05-2024) ಊರ ದೇವರ ಜಾತ್ರೆಯಲ್ಲಿ ತೊಡಗಿಸಿಕೊಂಡಿದ್ದ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಕೋಟೆಯ ಸುತ್ತಲೂ ಜಾಗದಲ್ಲಿ ಹಳ್ಳವನ್ನು ತೋಡಿದ್ದು ಬೇಳಿ ಹಾಕುವುದರ ಮೂಲಕ ಆಕ್ರಮಿಸಿಕೊಳ್ಳುವ ಪ್ರಯತ್ನವನ್ನು ನಡೆಸಿದ್ದಾರೆ. ಈ ಅತಿಕ್ರಮ ಕಾರ್ಯವನ್ನು ನಾವೆಲ್ಲರೂ ಸೇರಿ ವಿರೋಧಿಸುವ ಮೂಲಕ ನಮ್ಮ ಪೂರ್ವಜರು ಉಳಿಸಿಕೊಂಡು ಬಂದಿರುವ ಇತಿಹಾಸ ಹಾಗೂ ಪರಂಪರೆಯ ಸ್ಮಾರಕಗಳನ್ನು ರಕ್ಷಿಸಬೇಕಿದ್ದು, ಸದ್ಯದಲ್ಲಿ ಒಗ್ಗಟ್ಟಾಗಿ ಪ್ರತಿಭಟನೆ ನಡೆಸಬೇಕಿದೆ. ಅಂತೆಯೇ, ನಾವುಗಳು ಈ ದಿಸೆಯಲ್ಲಿ ಟಿ.ವಿ. ಮಾಧ್ಯಮದವರನ್ನು ಸಂಪರ್ಕಿಸಿದ್ದು ಸದ್ಯದಲ್ಲಿಯೇ ಒಂದು ಬೃಹತ್ ಪ್ರತಿಭಟನೆಯನ್ನು ನಡೆಸುವ ಮೂಲಕ ಸರ್ಕಾರವನ್ನು ಎಚ್ಚರಿಸಬೇಕಿದೆ. ಪ್ರತಿಭಟನೆಯ ದಿನಾಂಕ ಹಾಗೂ ಸಮಯವನ್ನು ಸದ್ಯದಲ್ಲಿಯೇ ತಿಳಿಸಲಿದ್ದು ಬೇಗೂರಿನ ಬಂಧುಗಳಾದ ತಾವುಗಳು ಸನ್ನಧ್ಧರಾಗಿರಬೇಕೆಂದು ಈ ಮೂಲಕ ವಿನಂತಿಸುತ್ತೇವೆ.
ನಮ್ಮ ಹಿರಿಯರು ಉಳಿಸಿ ಬೆಳೆಸಿರುವ ಸ್ಮಾರಕಗಳ ರಕ್ಷಣೆ ನಮ್ಮ ಪಾಲಿನದಾಗಿದೆ ಎಂಬುದನ್ನು ನೆನೆಪಿಸಿಕೊಳ್ಳೋಣ. ದಯಮಾಡಿ ಮುಂದಿನ ಸಂದೇಶಕ್ಕಾಗಿ ನಿರೀಕ್ಷಿಸಬೇಕೆಂದು ಸಂರಕ್ಷಣಾ ಸಮಿತಿಯ ಪರವಾಗಿ ವಿನಂತಿಸಿಕೊಳ್ಳುತ್ತೇವೆ. -ವಂದನೆ.